ಜುಲೈ 19 ಶುಕ್ರವಾರ, ಶ್ರೀಲಂಕಾದ ಡಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಏಷ್ಯಾಕಪ್ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನೊಂದಿಗೆ ಭಾರತ ವನಿತೆಯರು ಶುಭಾರಂಭ ಮಾಡಿದ್ದಾರೆ.
ಟೀಮ್ ಇಂಡಿಯಾ ಪರ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಪಾಕಿಸ್ತಾನ ನೀಡಿದ 109 ರನ್ ಸುಲಭ ಗುರಿಯನ್ನು ಟೀಮ್ ಇಂಡಿಯಾ ಕೇವಲ 14.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿದೆ.

ಈ ಮೂಲಕ ಟೀಮ್ ಇಂಡಿಯಾ ಮಹಿಳಾ ಏಷ್ಯಾಕಪ್ 2024ರಲ್ಲಿ ಮೊದಲು ಗೆಲುವು ಸಾಧಿಸಿದೆ. ಮಹಿಳಾ ಏಷ್ಯಾಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 7 ಪಂದ್ಯದಲ್ಲಿ 6 ರಲ್ಲಿ ಜಯ ಗಳಿಸಿರುವ ದಾಖಲೆಯನ್ನು ಹರ್ಮನ್‌ಪ್ರೀತ್ ಕೌರ್ ಪಡೆ ಬರೆದಿದೆ.
6 ಗೆಲುವಿನಲ್ಲಿ 5 ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಬಂದಿರುವುದು ಗಮನಾರ್ಹ. ಮಾಜಿ ನಾಯಕಿ ಮಿಥಾಲಿ ರಾಜ್ ಅವರು 2012ರ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ ತಂದು ಕೊಟ್ಟಿದ್ದರು.
ಬೀರುಸಿನ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ ಅವರು ಕೇವಲ 31 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 45 ರನ್ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿ ಔಟಾದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದಯಾಳನ್ ಹೇಮಲತಾ ಅವರು ಶಫಾಲಿ ವರ್ಮಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದರು. ಸೊಗಸಾಗಿ ಬ್ಯಾಟ್ ಬೀಸಿದ ಶಫಾಲಿ 30 ಎಸೆತಗಳಲ್ಲಿ 6 ಬೌಂಡರಿ ಹಾಗು 1 ಸಿಕ್ಸರ್ ಮೂಲಕ 40 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ತಾಳ್ಮೆಯುತ ಆಟವಾಡುತ್ತಿದ ಹೇಮಲತಾ (14) ಕೂಡ ಔಟಾದರು. ಕೊನೆಯಲ್ಲಿ ಹರ್ಮನ್‌ಪ್ರೀತ್ ಕೌರ್ (5) ಹಾಗು ಜೆಮಿಮಾ ರಾಡ್ರಿಗಸ್ (3) ಭಾರತಕ್ಕೆ ಗೆಲ್ಲಲು ನೆರವಾದರು.
ಪಾಕಿಸ್ತಾನ ಪರ ಸೈಯದಾ ಅರೂಬ್ ಶಾ 2 ವಿಕೆಟ್ ಉರುಳಿಸಿದರೆ, ನಶ್ರಾ ಸಂಧು ಒಂದು ವಿಕೆಟ್ ಪಡೆದು ತೃಪ್ತಿ ಪಟ್ಟರು.
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದಯಾಳನ್ ಹೇಮಲತಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ರೇಣುಕಾ ಠಾಕೂರ್ ಸಿಂಗ್.
ಪಾಕಿಸ್ತಾನ ತಂಡ: ಸಿದ್ರಾ ಅಮೀನ್, ಗುಲ್ ಫಿರೋಜಾ, ಮುನೀಬಾ ಅಲಿ(ವಿಕೆಟ್‌ಕೀಪರ್), ನಿದಾ ದಾರ್(ನಾಯಕಿ), ಅಲಿಯಾ ರಿಯಾಜ್, ಇರಾಮ್ ಜಾವೇದ್, ಫಾತಿಮಾ ಸನಾ, ತುಬಾ ಹಸನ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಸೈಯದಾ ಅರೂಬ್ ಶಾ.
ಪಾಕಿಸ್ತಾನ ಪರ ಸೈಯದಾ ಅರೂಬ್ ಶಾ 2 ವಿಕೆಟ್ ಉರುಳಿಸಿದರೆ, ನಶ್ರಾ ಸಂಧು ಒಂದು ವಿಕೆಟ್ ಪಡೆದು ತೃಪ್ತಿ ಪಟ್ಟರು.