ಮಹಿಳಾ ವಿಶ್ವಕಪ್: ಅತಿಮುಖ್ಯ ಪಂದ್ಯದಲ್ಲಿ ಮುಗ್ಗರಿಸಿದ ಭಾರತ; ಸೆಮಿಫೈನಲ್ ಅನುಮಾನ!

ನ್ಯೂಜಿಲೆಂಡ್ ನೆಲದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ 18ನೇ ಪಂದ್ಯ ಇಂದು ( ಮಾರ್ಚ್ 19 ) ಆಸ್ಟ್ರೇಲಿಯಾ ವನಿತೆಯರ ತಂಡ ಹಾಗೂ ಭಾರತ ವನಿತೆಯರ ತಂಡಗಳ ನಡುವೆ ನಡೆದಿದ್ದು, ಆಸ್ಟ್ರೇಲಿಯಾ ಭರ್ಜರಿ ಸಾಧಿಸಿ ಟೂರ್ನಿಯಲ್ಲಿ ಸತತ ಐದನೇ ಗೆಲುವು ಕಂಡಿದೆ. ಹೌದು, ಆಸ್ಟ್ರೇಲಿಯಾ ವನಿತೆಯರ ತಂಡ ಟೂರ್ನಿಯಲ್ಲಿ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ. ಇತ್ತ ಈ ಪಂದ್ಯ ಆರಂಭಕ್ಕೂ ಮುನ್ನ ಟೂರ್ನಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನಾಡಿ ಎರಡರಲ್ಲಿ ಸೋತು ಎರಡರಲ್ಲಿ ಗೆದ್ದಿದ್ದ ಭಾರತ ವನಿತೆಯರ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆಸ್ಟ್ರೇಲಿಯಾ ವನಿತೆಯರ ವಿರುದ್ಧದ ಈ ಪಂದ್ಯದಲ್ಲಿ ಜಯ ಗಳಿಸಿದರೆ ಮಾತ್ರ ಭಾರತ ವನಿತೆಯರ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ, ಇದೀಗ ಈ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಸೋತಿರುವುದರಿಂದ ತಂಡ ಸೆಮಿ ಫೈನಲ್ ಪ್ರವೇಶಿಸುವುದು ಅನುಮಾನ ಮೂಡಿಸಿದೆ.
ಇನ್ನು ಅಸ್ಟ್ರೇಲಿಯಾ ವನಿತೆಯರ ತಂಡ ಮತ್ತು ಭಾರತ ವನಿತೆಯರ ತಂಡಗಳ ನಡುವಿನ ಈ ಪಂದ್ಯ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿರುವ ಈಡನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ವನಿತೆಯರ ತಂಡ ಬೌಲಿಂಗ್ ಆಯ್ದುಕೊಂಡು ಭಾರತ ವನಿತೆಯರ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನಾ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಸ್ಮೃತಿ ಮಂಧಾನಾ 10 ರನ್ ಗಳಿಸಿ ಔಟ್ ಆದರೆ ಶೆಫಾಲಿ ವರ್ಮಾ 12 ರನ್ ಗಳಿಸಿ ಔಟ್ ಆದರು. ಹೀಗೆ ಟೀಮ್ ಇಂಡಿಯಾ 28 ರನ್‌ಗಳಿಗೆ ತನ್ನ ಮೊದಲೆರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಮೂರನೇ ವಿಕೆಟ್‌ಗೆ ಜತೆಯಾದ ಯಶ್ತಿಕಾ ಭಾಟಿಯಾ ಮತ್ತು ನಾಯಕಿ ಮಿಥಾಲಿ ರಾಜ್ 130 ರನ್‌ಗಳ ಜವಾಬ್ದಾರಿಯುತ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಯಶ್ತಿಕಾ ಭಾಟಿಯಾ 59 ರನ್ ಗಳಿಸಿದರೆ, ನಾಯಕಿ ಮಿಥಾಲಿ ರಾಜ್ 68 ರನ್ ಗಳಿಸಿದರು. ಇವರ ಜೊತೆಗೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ ಅಜೇಯ 57 ರನ್ ಬಾರಿಸಿ ಮಿಂಚಿದರು, ಇನ್ನುಳಿದಂತೆ ರಿಚಾ ಘೋಷ್ 8 ರನ್, ಸ್ನೇಹ್ ರಾಣಾ ೦, ಪೂಜಾ ವಸ್ತ್ರಾಕರ್ 38 ರನ್ ಗಳಿಸಿದರು. ಹೀಗೆ ಯಶ್ತಿಕಾ ಭಾಟಿಯಾ, ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ಆಕರ್ಶಕ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಎದುರಾಳಿ ಆಸ್ಟ್ರೇಲಿಯಾ ವನಿತೆಯರ ತಂಡಕ್ಕೆ ಗೆಲ್ಲಲು 278 ರನ್‌ಗಳ ಗುರಿಯನ್ನು ನೀಡಿತು. ಇನ್ನು ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 3 ವಿಕೆಟ್, ಅಲಾನಾ ಕಿಂಗ್ 2 ವಿಕೆಟ್ ಹಾಗೂ ಜೆಸ್ ಜೊನಾಸೆನ್ 1 ವಿಕೆಟ್ ಪಡೆದರು.
ಹೀಗೆ ಟೀಮ್ ಇಂಡಿಯಾ ನೀಡಿದ 278 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಪರ ಆರಂಭಿಕ ಅಟಗಾರ್ತಿಯರಾದ ರಾಚೆಲ್ ಹೇಯ್ನ್ಸ್ 43 ರನ್ ಮತ್ತು ಅಲಿಸಾ ಹೀಲಿ 72 ರನ್ ಗಳಿಸಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಗ್ ಲ್ಯಾನಿಂಗ್ 97 ರನ್ ಗಳಿಸಿ ಶತಕ ವಂಚಿತರಾದರು. ಇನ್ನುಳಿದಂತೆ ಎಲಿಸ್ ಪೆರ್ರಿ 28 ರನ್, ಬೆತ್ ಮೂನಿ 30 ರನ್ ಹಾಗೂ ತಹಿಲಾ ಮೆಕ್‌ಗ್ರಾ ಅಜೇಯ ೦ ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಸತತ ಐದನೇ ಜಯ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications