ವಿಶ್ವಕಪ್: ಪಾಕ್ ವಿರುದ್ಧ ಔಟಾಗದೇ ಇದ್ದರೂ ವಿರಾಟ್ ಹೊರನಡೆದದ್ದೇಕೆ?

ಮ್ಯಾಂಚೆಸ್ಟರ್, ಜೂನ್ 16: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಹಣಾಹಣಿ ಟೀಮ್ ಇಂಡಿಯಾ ನಾಯಕ ಔಟಾಗದೇ ಇದ್ದರು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 45 ಓವರ್‌ಗಳಲ್ಲಿ 305+ ಎನ್‌ಗಳನ್ನು ಗಳಿಸಿದ್ದಾಗ ಮಳೆ ಸುರಿದ ಕಾರಣ ಆಟಕ್ಕೆ ಕೆಲ ಕಾಲ ಅಡಚಣೆಯಾಗಿತ್ತು. ಬಳಿಕ ಕೆಲ ನಿಮಿಷಗಳ ವಿರಾಮದ ನಂತರ ಆಟ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ 64 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸಿದ್ದರು.
ಆದರೆ, ಮೊಹಮ್ಮದ್ ಅವರ ಬೌಲಿಂಗ್‌ನಲ್ಲಿ ಪುಟಿದೆದ್ದ ಬೌನ್ಸರ್ ಒಂದನ್ನು ಸ್ಕ್ವೇರ್ ಲೆಗ್ ಕಡೆಗೆ ಬಾರಿಸುವ ಪ್ರಯತ್ನ ನಡೆಸಿದರು. ಆದರೆ ಚೆಂಡು ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್ ಕೈ ಸೇರಿತ್ತು. ಬಳಿಕ ಪಾಕ್ ಆಟಗಾರರು ಕಾಟ್ ಬಿಹೈಂಡ್ ದಿ ವಿಕೆಟ್‌ಗಾಗಿ ಮನವಿ ಮಾಡಿದರಾದರೂ ಸ್ಟ್ರೈಕ್ ಅಂಪೈರ್ ನಾಟ್‌ಔಟ್ ನಿರ್ಧಾರ ನೀಡುವುದರಲ್ಲಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ಸ್ಫೂರ್ತಿ ಮೆರೆಯಲು ಮುಂದಾದ ವಿರಾಟ್, ಚೆಂಡು ಬ್ಯಾಟಿಗೆ ತಾಗಿದೆ ಎಂದು ಭಾವಿಸಿ ಖುದ್ದಾಗಿ ಪೆವಿಲಿಯನ್ ಕಡೆಗೆ ಹೆಜ್ಜೆಹಾಕಲಾರಂಭಿಸಿದರು. ಬಳಿಕ ಟೆಲಿವಿಷನ್ ರೀಪ್ಲೇನಲ್ಲಿ ಚೆಂಡು ಬ್ಯಾಟ್‌ಗಿಂತ ದೂರವಿದ್ದು ಯಾವುದೇ ರೀತಿಯಲ್ಲಿ ಬ್ಯಾಟ್‌ಗೆ ತಾಗಿಲ್ಲ ಎಂಬುದು ಬೆಳಕಿಗೆ ಬಂದಿತು. ಇದರಿಂದ ವಿರಾಟ್ ಕೂಡ ಅಚ್ಚರಿಗೆ ಒಳಗಾಗಿ ಡ್ರೆಸಿಂಗ್ ರೂಮ್‌ನಲ್ಲಿ ತಮ್ಮ ಬ್ಯಾಟ್‌ನ ಹ್ಯಾಂಡಲ್‌ನಲ್ಲೇನಾದರೂ ಶಬ್ದ ಬರುತ್ತಿದೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದರು.
ಬ್ಯಾಟ್‌ನ ಹ್ಯಾಂಡಲ್ ಮಾಡಿದ ಶಬ್ದವನ್ನು ತಪ್ಪಾಗಿ ಗ್ರಹಿಸಿದ ವಿರಾಟ್ ಚೆಂಡು ಬ್ಯಾಟಿಗೆ ತಾಗಿದೆ ಎಂದು ಪೆವಿಲಿಯನ್ ಕಡೆಗೆ ಹೆಜ್ಜೆಹಾಕಿ ಬೆಪ್ಪಾದರು. ವಿರಾಟ್ ಕ್ರೀಸ್‌ನಲ್ಲೇ ಉಳಿಸಿದ್ದರೆ, ಭಾರತ ತಂಡ 50 ಓವರ್‌ಗಳಲ್ಲಿ 336/5ರ ಬದಲಾಗಿ 350+ ರನ್‌ಗಳಿಸುವ ಸಾಧ್ಯತೆ ಇತ್ತು. 314 ರನ್‌ಗಳಿಸಿದ್ದಾಗ ವಿರಾಟ್ ತಮ್ಮ ವಿಕೆಟ್ ಅನ್ನು ಎದುರಾಳಿಗೆ ಉಡುಗೊರೆಯಾಗಿ ನೀಡಿದಂತಾಯಿತು.

ಸಚಿನ್ ವಿಶ್ವ ದಾಖಲೆಯನ್ನು ಮುರಿದ ಕೊಹ್ಲಿ!
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 65 ಎಸೆತಗಳಲ್ಲಿ 7 ಫೋರ್‌ಗಳನ್ನು ಒಳಗೊಂಡ 77 ರನ್‌ಗಳನ್ನು ಚಚ್ಚಿದ್ದರು.
ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ಕಿಂಗ್ ಕೊಹ್ಲಿ ಮುಡಿಗೇರಿದೆ. ಪಂದ್ಯಕ್ಕೂ ಮುನ್ನ ಕೊಹ್ಲಿಗೆ 11 ಸಾವಿರ ರನ್ ಗಡಿ ಮುಟ್ಟಲು 57 ರನ್‌ಗಳ ಅಗತ್ಯವಿತ್ತು. ಇದೀಗ 230 ಒಡಿಐ ಪಂದ್ಯಗಳಲ್ಲಿ ಕೊಹ್ಲಿ 11 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಇದೀಗ ಒಡಿಐ ಕ್ರಿಕೆಟ್‌ನಲ್ಲಿ 11 ಸಾವಿರಕ್ಕೂ ಅಧಿಕ ರನ್‌ಗಳನ್ನು ಗಳಿಸಿದವರ ಪೈಕಿ ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್, ಕುಮಾರ ಸಂಗಕ್ಕಾರ, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ, ಇಂಜಮಾಮ್ ಉಲ್ ಹಕ್, ಜಾಕ್ ಕಾಲಿಸ್ ಮತ್ತು ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದಾರೆ.
ಅಂದಹಾಗೆ ಭಾರತ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಈ ದಾಖಲೆ ಇದೀಗ ಕೊಹ್ಲಿ ಮುಡಿಗೇರಿದೆ. ಸವಿನ್ ತೆಂಡೂಲ್ಕರ್ 2002ರಲ್ಲಿ ತಮ್ಮ 284ನೇ ಒಡಿಐನಲ್ಲಿ ಇಂಗ್ಲೆಂಡ್ ವಿರುದ್ಧ 11 ಸಾವಿರ ರನ್‌ಗಳ ಗಡಿ ದಾಟಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (140) ಅವರ ಶತಕ ಮತ್ತು ಕೆ.ಎಲ್ ರಾಹುಲ್ (57) ಮತ್ತು ವಿರಾಟ್ ಕೊಹ್ಲಿ (77) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 336 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ.

ರೋಹಿತ್ ಶರ್ಮಾ ಶತಕಗಳ ದಾಖಲೆ!
ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ವೃತ್ತಿ ಬದುಕಿನ 24ನೇ ಒಡಿಐ ಶತಕ ಸಿಡಿಸಿ ಅಬ್ಬರಿಸಿದರು. ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್, ನೋಡ ನೋಡುತ್ತಿದ್ದಂತೆಯೇ 85 ಎಸೆತಗಳಲ್ಲಿ ಶತಕ ಸಿಡಿಸಿ ಟೀಮ್ ಇಂಡಿಯಾದ ಬೃಹತ್ ಮೊತ್ತಕ್ಕೆ ಬೇಕಿದ್ದ ಭರ್ಜರಿ ಅಡಿಪಾಯ ಹಾಕಿಕೊಟ್ಟರು. ಇದು ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಅವರ ಎರಡನೇ ಶತಕವಾಗಿ. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು. ಇನ್ನು ವಿಶ್ವಕಪ್ ಟೂರ್ನಿಗಳಲ್ಲಿ ರೋಹಿತ್ ಅವರ ಮೂರನೇ ಶತಕ ಇದಾಗಿದೆ. ಈ ಮೂಲಕ ವಿಶ್ವಕಪ್ ಟೂರ್ನಿಗಳಲ್ಲಿ 3 ಶತಕಗಳನ್ನು ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಕೇವಲ ಸಚಿನ್ ತೆಂಡೂಲ್ಕರ್ (6), ಸೌರವ್ ಗಂಗೂಲಿ (4) ಮತ್ತು ಶಿಖರ್ ಧವನ್ (3) ಈ ಪಟ್ಟಿಯಲ್ಲಿ ಮುಂದಿದ್ದಾರೆ. ಪಾಕಿಸ್ತಾನದ ಬೌಲರ್‌ಗಳನ್ನು ನಬಂದಂತೆ ದಂಡಿಸಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ನಾಲ್ಕನೇ ದಿವಶತಕದತ್ತ ಕಣ್ಣಿಟ್ಟಿದ್ದ ರೋಹಿತ್, 113 ಎಸೆತಗಳಲ್ಲಿ 14 ಫೋರ್ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 140 ರನ್‌ಗಳನ್ನು ಗಳಿಸಿದ್ದಾಗ ಫೈನಲ್ ಕಡೆಗಿನ ಫೀಲ್ಡರ್ ಅವರನ್ನು ಗಮನಿಸದೆ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿದರು.

23 ವರ್ಷಗಳ ದಾಖಲೆ ಮುರಿದ ರೋಹಿತ್-ರಾಹುಲ್
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ 23 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಅಂದಹಾಗೆ ಏಕದಿನ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 137 ಎಸೆತಗಳಲ್ಲಿ 136 ರನ್‌ಗಳ ಜೊತೆಯಾಟ ನಡೆಸಿತು. ಈ ಮೂಲಕ ವಿಶ್ವಕಪ್‌ನಲ್ಲಿ ಮೊದಲ ವಿಕೆಟ್‌ಗೆ ಭಾರತದ ಗರಿಷ್ಠ ರನ್‌ಗಳ ಜೊತೆಯಾಟವಾಡಿದ್ದ ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಂಗ್ ಸಿಧು ಅವರ 90 ರನ್‌ಗಳ ದಾಖಲೆಯನ್ನು ನುಚ್ಚು ನೂರು ಮಾಡಿದ್ದಾರೆ. ಸಚಿನ್ ಮತ್ತು ಸಿಧು ಜೋಡಿ 1996ರ ವಿಶ್ವಕಪ್‌ನಲ್ಲಿ ಭಾರತಕ್ಕೆ 287 ರನ್‌ಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಭಾರತಕ್ಕೆ 37 ರನ್‌ಗಳ ಗೆಲುವು ಸಿಕ್ಕಿತ್ತು. ಇದೇ ವೇಳೆ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಶತಕದ ಜೊತೆಯಾಟವಾಡಿದ ಭಾರತದ ಮೊತ್ತ ಮೊದಲ ಆರಂಭಿಕ ಜೋಡಿ ಎಂಬ ಕೀರ್ತಿಗೂ ರೋಹಿತ್ ಮತ್ತು ರಾಹುಲ್ ಪಾತ್ರರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಭಾರತೀಯರು
ಸಚಿನ್ ತೆಂಡೂಲ್ಕರ್ (06)
ಸೌರವ್ ಗಂಗೂಲಿ (04)
ಶಿಖರ್ ಧವನ್ (03)
ರೋಹಿತ್ ಶರ್ಮಾ (03)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications