ಅಕ್ಟೋಬರ್ 5ರಿಂದ ಅಧಿಕೃತವಾಗಿ ಪ್ರಾರಂಭವಾಗುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಇದರತ್ತ ಗಮನ ಹರಿಸಿವೆ. ಭಾರತ ಈ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ.
ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಇನ್ನು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಅವರು 2023ರ ವಿಶ್ವಕಪ್‌ಗಾಗಿ ತಮ್ಮ ನಾಲ್ಕು ಸಂಭಾವ್ಯ ಸೆಮಿಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಿದ್ದಾರೆ.
ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಟ್ರೋಫಿ ಎತ್ತುವ ನೆಚ್ಚಿನ ತಂಡಗಳಾಗುವ ಸಾಲಿನಲ್ಲಿ ನಿಲ್ಲುವುದನ್ನು ನಾನು ನೋಡುತ್ತೇನೆ ಎಂದು ಮಾಜಿ ವಿಶ್ವಕಪ್ ವಿಜೇತ ಆಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ಅಕ್ಟೋಬರ್ 5ರಂದು ಪ್ರಾರಂಭವಾಗುವ ಐಸಿಸಿ ಟೂರ್ನಮೆಂಟ್‌ಗಾಗಿ ಉಳಿದ ಒಂಬತ್ತು ತಂಡಗಳು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಲಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಉತ್ತಮವಾಗಿ ತಯಾರಿ ನಡೆಸಿದ್ದು, ಇತ್ತೀಚೆಗೆ 4 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-1 ಅಂತರದಿಂದ ಸೋಲಿಸಿದೆ.

ಅಹಮದಾಬಾದ್‌ನಲ್ಲಿ ನಡೆದ ಪ್ರಚಾರ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಡಮ್ ಗಿಲ್‌ಕ್ರಿಸ್ಟ್, "ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಆಡಬಹುದೆಂದು ನಾನು ಭಾವಿಸುತ್ತೇನೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮತ್ತೆರಡು ತಂಡಗಳಾಗಿವೆ," ಎಂದರು.
ಐದು ಬಾರಿಯ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, 2023ರ ಮಾರ್ಚ್‌ನಲ್ಲಿ ನಡೆದ ದ್ವಿಪಕ್ಷೀಯ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಆಡಮ್ ಗಿಲ್‌ಕ್ರಿಸ್ಟ್ ತಿಳಿಸಿದರು.
ಇನ್ನು ಇತ್ತೀಚಿಗೆ ಮೊದಲೆರಡು ಪಂದ್ಯಗಳ ನಂತರ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರೂ ಏಕದಿನ ಸರಣಿಯನ್ನು ಗೆಲ್ಲಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2-3 ಅಂತರದಿಂದ ಸೋತಿದೆ.
"ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಬರುವಾಗ ದಕ್ಷಿಣ ಆಫ್ರಿಕಾದಲ್ಲಿ ಅವರ ಪ್ರಯತ್ನದಿಂದ ಬಹಳಷ್ಟು ಕಲಿಯುತ್ತಾರೆ. ಆಸೀಸ್ ತಂಡ ಭಾರತದ ವಿರುದ್ಧ ವಿಶ್ವಕಪ್‌ಗೆ ಮೊದಲು ಮೂರು ಪಂದ್ಯಗಳನ್ನು ಪಡೆದಿದ್ದಾರೆ," ಎಂದು ಗಿಲ್‌ಕ್ರಿಸ್ಟ್ ಹೇಳಿದರು.
"ಆಸ್ಟ್ರೇಲಿಯಾ ತಂಡವು ಭಾರತ ವಿರುದ್ಧ ಆಡುವಾಗ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುತ್ತದೆ. ಆಗ ತಂಡವು ಎಲ್ಲಿದೆ ಎಂಬುದರ ಕುರಿತು ನಮಗೆ ಸ್ವಲ್ಪ ತಿಳಿಯಬಹುದು," ಎಂದು ಆಡಮ್ ಗಿಲ್‌ಕ್ರಿಸ್ಟ್ ತಮ್ಮ ತವರಿನ ತಂಡದ ಬಗ್ಗೆ ಅಭಿಪ್ರಾಯಪಟ್ಟರು.
"ದಕ್ಷಿಣ ಆಫ್ರಿಕಾದಲ್ಲಿ ಸ್ಪಿನ್ನರ್ ಆಡಮ್ ಝಂಪಾ ಸ್ವಲ್ಪಮಟ್ಟಿಗೆ ದುಬಾರಿಯಾಗಿದ್ದರು. ಆದರೆ ಭಾರತದಲ್ಲಿ ವಿಭಿನ್ನ ಪಿಚ್‌ಗಳೊಂದಿಗೆ ವಿಭಿನ್ನ ಪರಿಸ್ಥಿತಿಗಳಿವೆ ಮತ್ತು ಆತ ವಿಶ್ವ ದರ್ಜೆಯ ಸ್ಪಿನ್ ಬೌಲರ್. ಅವರು ಅದನ್ನು ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ತೋರಿಸಿದ್ದಾರೆ. ಇದೀಗ 50-ಓವರ್‌ಗಳ ವಿಶ್ವಕಪ್‌ನಲ್ಲಿ ತನ್ನ ಸಾಮರ್ಥ್ಯ ತೋರಿಸುತ್ತಾನೆ," ಎಂದರು.
ಗೆಲುವು ಆಟಗಾರರು ಗಾಯಗೊಂಡಿರುವ ಕಾರಣ ಆಸ್ಟ್ರೇಲಿಯಾ ಸದ್ಯಕ್ಕೆ ಹಿನ್ನಡೆ ಅನುಭವಿಸುತ್ತಿದೆ. ಭಾರತ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಸ್ಟೀವನ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದ ಮರಳಲು ಸಜ್ಜಾಗಿದ್ದಾರೆ. ಆದರೆ ಟ್ರಾವಿಸ್ ಹೆಡ್ ಬೆರಳು ಮುರಿತದ ನಂತರ ವಿಶ್ವಕಪ್‌ನ ಮೊದಲಾರ್ಧವನ್ನು ಕಳೆದುಕೊಳ್ಳಲಿದ್ದಾರೆ.
ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಆಡಿದಾಗ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಕಳಪೆ ಫಾರ್ಮ್‌ನಿಂದಾಗಿ ಮಧ್ಯಮ ಕ್ರಮಾಂಕಕ್ಕೆ ಇಳಿದಿದ್ದರು. ಈ ಬಗ್ಗೆ ಆಡಮ್ ಗಿಲ್‌ಕ್ರಿಸ್ಟ್ ಮಾತನಾಡಿ, ವಾರ್ನರ್ ಅಗ್ರ ಕ್ರಮಾಂಕದ ಅಭಿಮಾನಿಯಲ್ಲ ಎಂದು ಹೇಳಿದರು.