World cup 2023: ಭಾರತ vs ಪಾಕಿಸ್ತಾನ ಕದನದ ಬಗ್ಗೆ ಬಾಬರ್ ಅಜಂ ಹೇಳಿಕೆ: ಫೈನಲ್ ನಮ್ಮ ಗುರಿ ಎಂದ ಪಾಕ ನಾಯಕ
ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾದಾಗಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯ ಬಗ್ಗೆ ಸಾಕಷ್ಟು ಚರ್ಚೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದೆ. ಎರಡು ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಆಡದ ಬಳಿಕ ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿರುವ ಕಾರಣ ಈ ಚರ್ಚೆಗಳು ಸಹಜ ಕೂಡ. ಆದರೆ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯಕ್ಕೆ ತಾವು ಹೆಚ್ಚಿನ ಗಮನ ನೀಡಲಾರೆವು ವಿಶ್ವಕಪ್ ಗೆಲುವುದೇ ನಮ್ಮ ಗುರಿ ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದ್ದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿರುವ ಬಾಬರ್ ಅಜಂ ಭಾರತ ಪಾಕಿಸ್ತಾನ ಪಂದ್ಯಕ್ಕೆ ವಿಶೇಷ ಪ್ರಾಧಾನ್ಯತೆ ನೀಡುವುದಿಲ್ಲ ಎಂದು ಹೇಳಿದ್ದು ಲೀಗ್ ಹಂತದ ಎಲ್ಲಾ ಪಂದ್ಯಗಳಿಗೂ ನಾವು ಹೆಚ್ಚಿನ ಮಹತ್ವವನ್ನು ನೀಡಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ತಂಡ ಭಾರತದಲ್ಲಿ ಕೊನೆಯ ಬಾರಿಗೆ 2016ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಡಿದ್ದರೆ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ 2019ರ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿತ್ತು. ಇದೀಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಎರಡೂ ರಾಷ್ಟ್ರಗಳ ಅಭಿಮಾನಿಗಳು ಮತ್ತೊಮ್ಮೆ ಬದ್ಧ ಎದುರಾಳಿಗಳ ಪೈಪೋಟಿಗೆ ಸಾಕ್ಷಿಯಾಗಲು ಸಿದ್ಧರಾಗಿದ್ದಾರೆ. ಆದರೆ ಐಸಿಸಿಗೆ ನೀಡಿರುವ ಸಂದರ್ಶನದ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಮುಖಾಮುಖಿಗೆ ಉಳಿದ ಪಂದ್ಯಗಳಿಗೆ ನೀಡುವಷ್ಟೇ ಮಹತ್ವ ನೀಡುವುದಾಗಿ ಹೇಳಿಕೊಂಡಿದ್ದಾರೆ.
"ನಾವು ವಿಶ್ವಕಪ್ ಆಡುವುದಕ್ಕಾಗಿ ತೆರಳುತ್ತಿದ್ದೇವೆ. ಕೇವಲ ಭಾರತ ತಂಡವನ್ನು ಎದುರಿಸುವುದಕ್ಕಾಗಿ ಮಾತ್ರವಲ್ಲ. ಅಲ್ಲಿ 8 ಇತರ ತಂಡಗಳು ಕೂಡ ಇವೆ. ಅಲ್ಲಿ ಭಾರತವನ್ನು ಮಾತ್ರವೇ ಮಣಿಸಿದರೆ ನಾವು ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ನಾವು ಕೇವಲ ಒಂದು ತಂಡವನ್ನು ಮಾತ್ರವೇ ಗುರಿ ಮಾಡಿಕೊಂಡಿಲ್ಲ. ಈ ಟೂರ್ನಿಯಲ್ಲಿರುವ ಎಲ್ಲಾ ತಂಡಗಳ ವಿರುದ್ಧವೂ ಗೆಲುವುದು ನಮ್ಮ ಗುರಿ. ಎಲ್ಲಾ ತಂಡಗಳ ವಿರುದ್ಧವೂ ಉತ್ತಮವಾಗಿ ಆಡುವುದು ಹಾಗೂ ಎಲ್ಲಾ ತಂಡಗಳ ವಿರುದ್ಧ ಗೆಲುವು ಸಾಧಿಸುವುದು ನಮ್ಮ ಯೋಜನೆ" ಎಂದಿದ್ದಾರೆ ಪಾಕಿಸ್ತಾನದ ನಾಯಕ ಬಾಬರ್ ಅಜಂ.
ಇನ್ನು ಈಗಾಗಲೇ ಹೇಳಿರುವಂತೆ ಪಾಕಿಸ್ತಾನ ಅಹಮದಾಬಾದ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದ್ದು ಉಳಿದಂತೆ ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಈ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಇತರ ತಂಡಗಳನ್ನು ಎದುರಿಸಲಿದೆ. ಬಾಬರ್ ವಿಭಿನ್ನ ವಾತಾವರಣದಲ್ಲಿ ಆಡುವ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ತಮ್ಮ ತಂಡ ಕೇವಲ ಒಂದು ಪಂದ್ಯದ ಮೇಲೆ ಕೇಂದ್ರೀಕರಿಸುವ ಬದಲು ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದನ್ನು ಬಯಸುತ್ತದೆ" ಎಂದಿದ್ದಾರೆ ಬಾಬರ್ ಅಜಂ.
"ನೀವು ವಿಭಿನ್ನ ಪರಿಸ್ಥಿತಿಗಳಲ್ಲಿ ಮತ್ತು ವಿಭಿನ್ನ ವಾತಾವರಣದಲ್ಲಿ ಆಡುವುದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಅದನ್ನೇ ನಾವು ಸವಾಲು ಎನ್ನುವುದು. ಆ ಸವಾಲನ್ನು ನೀವು ಸ್ವೀಕರಿಸಬೇಕು ಹಾಗೂ ಅದಕ್ಕೆ ಪೂರಕವಾಗಿ ಆಡಬೇಕು. ನಾನು ಆಟಗಾರನಾಗಿ ಹಾಗೂ ನಾಯಕನಾಗಿ ಪ್ರತಿಯೊಂದು ದೇಶದಲ್ಲಿಯೂ ರನ್‌ಗಳಿಸಲು ಬಯಸುತ್ತಿದ್ದು ಪಾಕಿಸ್ತಾನದ ಗೆಲುವನ್ನು ಬಯಸುತ್ತೇನೆ. ಇದನ್ನು ನಾವೆಲ್ಲರೂ ತಲೆಯಲ್ಲಿಟ್ಟುಕೊಂಡಿದ್ದು ಕೇವಲ ಒಂದು ತಂಡದ ವಿರುದ್ಧ ಮಾತ್ರ ಆಡುವುದಲ್ಲ ಎನ್ನುವುದು ಎಲ್ಲರ ತಲೆಯಲ್ಲೂ ಇದೆ" ಎಂದಿದ್ದಾರೆ ಬಾಬರ್ ಅಜಂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications