ಭಾನುವಾರ, ಅಕ್ಟೋಬರ್ 15ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಗುಂಪಿನ ಪಂದ್ಯದಲ್ಲಿ ದುರ್ಬಲ ಅಫ್ಘಾನಿಸ್ತಾನ ವಿರುದ್ಧ 69 ರನ್‌ಗಳ ಹೀನಾಯ ಸೋಲಿನ ನಂತರ ಇಂಗ್ಲೆಂಡ್ ಅತ್ಯಂತ ಕಳಪೆ ದಾಖಲೆಯನ್ನು ಮುಡಿಗೇರಿಸಿಕೊಂಡಿದೆ.
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಟೆಸ್ಟ್ ಆಡುವ ಎಲ್ಲಾ 11 ದೇಶಗಳ ವಿರುದ್ಧ ಸೋಲು ಕಂಡ ಇಂಗ್ಲೆಂಡ್ ಮೊದಲ ತಂಡವೆಂಬ ಕುಖ್ಯಾತಿಗೆ ಒಳಗಾಗಿದೆ.

ಕ್ರಿಕೆಟ್ ಜನಕ ಇಂಗ್ಲೆಂಡ್‌ಗೆ ಇಂತಹ ಶಾಕಿಂಗ್ ಸೋಲುಗಳ ಮೂಲವು ಅರ್ಧ ಶತಮಾನದಷ್ಟು ಹಿಂದಿನ 1975ರ ವಿಶ್ವಕಪ್‌ನಿಂದಲೂ ಕಂಡುಬಂದಿದೆ.
1975ರ ಮೊದಲ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತನ್ನ ಮೊದಲ ವಿಶ್ವಕಪ್ ಸೋಲಿನ ರುಚಿಯನ್ನು ಅನುಭವಿಸಿತು. ನಾಲ್ಕು ವರ್ಷಗಳ ನಂತರ 1979ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಸೋಲು ಕಂಡಿತು.

ಆ ಬಳಿಕ 1983 ಮತ್ತು 1987ರಲ್ಲಿ ಏಷ್ಯಾದ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಸತತವಾಗಿ ಶಾಕಿಂಗ್ ಸೋಲುಗಳನ್ನು ಎದುರಿಸಿತು. ಏತನ್ಮಧ್ಯೆ ನ್ಯೂಜಿಲೆಂಡ್ ಕೂಡ 1983ರಲ್ಲಿ ಕ್ರಿಕೆಟ್ ದೈತ್ಯವೆನಿಸಿದ್ದ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಗೆಲುವು ದಾಖಲಿಸಿತು.
1992ರ ವರ್ಷವು ಇಂಗ್ಲೆಂಡ್‌ಗೆ ಮತ್ತೊಂದು ಆಘಾತವನ್ನು ನೀಡಿತು. ಏಕೆಂದರೆ ಕ್ರಿಕೆಟ್ ಶಿಶುವಾಗಿದ್ದ ಜಿಂಬಾಬ್ವೆ ಅನಿರೀಕ್ಷಿತ ಕ್ರಿಕೆಟ್ ಪಾಠವನ್ನು ಕಲಿಸಿತು.
ನಾಲ್ಕು ವರ್ಷಗಳ ನಂತರ 1996ರಲ್ಲಿ ಶ್ರೀಲಂಕಾ ತಂಡವು ಇಂಗ್ಲೆಂಡ್ ತಂಡದ ದುರ್ಬಲತೆಯನ್ನು ಪುನರುಚ್ಚರಿಸಿತು. 1996ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಕ್ರಿಕೆಟ್ ಜನಕರಿಗೆ ಸೋಲಿನ ಪಾಠ ಕಲಿಸಿದ್ದರಿಂದ ಇಂಗ್ಲೆಂಡ್‌ಗೆ ಶಾಕಿಂಗ್ ಸೋಲುಗಳ ಸರಣಿ ಮುಂದುವರೆಯಿತು.
2011ರ ವಿಶ್ವಕಪ್‌ನಲ್ಲಿ ಫಾಸ್ಟ್ ಫಾರ್ವರ್ಡ್ ಮತ್ತು ಏಷ್ಯನ್ ಮಿನ್ನೋಸ್ ಎನಿಸಿದ್ದ ಬಾಂಗ್ಲಾದೇಶ ಆಂಗ್ಲ ತಂಡದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ವಿಶ್ವದ ಗಮನ ಸೆಳೆದರು.
ಅದೇ ಆವೃತ್ತಿಯಲ್ಲಿ (2011) ಐರ್ಲೆಂಡ್‌ನ "ಹಸಿರು ಬಣ್ಣದ ಹುಡುಗರ' ವಿರುದ್ಧದ ಹೀನಾಯ ಮತ್ತು ಅವಮಾನಕರ ಸೋಲು, ಇಂಗ್ಲೆಂಡ್‌ನ ಸೋಲುಗಳ ದಾಖಲೆಗೆ ಮತ್ತೊಂದು ಹಂತವನ್ನು ಸೇರಿಸಿತು.
ಇದೀಗ 2023ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವು ಉದಯೋನ್ಮುಖ ತಂಡ ಮತ್ತು ವಿಶ್ವಕಪ್‌ನ ಮಿನ್ನೋಸ್ ಎನಿಸಿರುವ ಅಫ್ಘಾನಿಸ್ತಾನ ವಿರುದ್ಧ ಮಕಾಡೆ ಮಲಗಿದ ಕಾರಣ ಇಂಗ್ಲೆಂಡ್ ಕ್ರಿಕೆಟ್ ತಂಡ ಹೊಸ ಕನಿಷ್ಠ ಮಟ್ಟಕ್ಕೆ ಇಳಿಯಿತು.
ಭಾನುವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಒಟ್ಟು 284 ರನ್‌ಗಳನ್ನು ಕಲೆಹಾಕಿತು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರ ಸ್ಫೋಟಕ 80 ರನ್‌ಗಳ ಇನ್ನಿಂಗ್ಸ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕವು ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ನೆರವಾಯಿತು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಿಣುಕಾಟ ನಡೆಸಿ 215 ರನ್‌ಗಳಿಗೆ ಆಲೌಟ್ ಆಯಿತು. ಹ್ಯಾರಿ ಬ್ರೂಕ್ ಮಾತ್ರ ಒತ್ತಡದ ಪರಿಸ್ಥಿತಿಗೆ ಉತ್ತಮವಾಗಿ ಹೊಂದಿಕೊಂಡು 66 ರನ್ ಗಳಿಸುವ ಮೂಲಕ ಹೋರಾಟ ನೀಡಿದರು.
ಅಫ್ಘಾನಿಸ್ತಾನ ಸ್ಪಿನ್ನರ್‌ಗಳಾದ ಮುಜೀಬ್-ಉರ್-ರೆಹಮಾನ್ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.