ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಈ ಬಾರಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿ ಅಭಿಯಾನ ಆರಂಭಿಸಲಿದೆ. ಇದೇ ವೇಳೆ ಐಸಿಸಿ ಪಂದ್ಯಾವಳಿಗಳ ನಾಕೌಟ್ ಹಂತಗಳಲ್ಲಿ ತಮ್ಮ ಕಳಪೆ ದಾಖಲೆಯ ಬಗ್ಗೆ ಜಾಗೃತವಾಗಿರಬೇಕಾಗುತ್ತದೆ.
ಇದೇ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಅಂತಿಮ ವೇಳಾಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

2023ರ ಏಕದಿನ ವಿಶ್ವಕಪ್ ನಾಕೌಟ್‌ಗೂ ಮುನ್ನ ಭಾರತ ತಂಡ ಇತರ ಒಂಬತ್ತು ದೇಶಗಳ ವಿರುದ್ಧ ಆಡಲಿದೆ. ಸದ್ಯ ಹರಿದಾಡುತ್ತಿರುವ ವೇಳಾಪಟ್ಟಿಯ ಪ್ರಕಾರ, ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಾಬರ್ ಅಜಂ ತಂಡವನ್ನು ಎದುರಿಸುವಾಗ ಕ್ರೀಡಾಂಗಣವು ತುಂಬಿ ತುಳುಕುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯ ಸ್ವಲ್ಪ ಸಮಯದವರೆಗೆ ಹೃದಯ ಬಡಿತವನ್ನು ನಿಲ್ಲಿಸಲಿದೆ. ಏಕೆಂದರೆ ಒಂದು ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿಸಲು ಕಾಯುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
"2023ರ 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ವಲ್ಪ ಸಮಯದವರೆಗೆ ಹೃದಯ ಬಡಿತಗಳು ನಿಲ್ಲುತ್ತವೆ. 1.25 ಲಕ್ಷ ಜನರು ಸೇರಲಿದ್ದು, ಇದೊಂದು ಒಂದು ಕುತೂಹಲಕಾರಿ ಪಂದ್ಯ ಹಾಗೂ ಸರಿಯಾದ ಬ್ಲಾಕ್-ಬಸ್ಟರ್ ವಿಷಯ," ಎಂದು ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ ಪಂದ್ಯ ಮಳೆಗೆ ತುತ್ತಾಗುವ ಸಾಧ್ಯತೆ ಇದೆ: ಆಕಾಶ್ ಚೋಪ್ರಾ
ಅಕ್ಟೋಬರ್ 8ರಂದು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ತಂಡವು ತಮ್ಮ ವಿಶ್ವಕಪ್ ಅಭಿಯಾನವನ್ನು ಕಷ್ಟಕರವಾದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಈವರೆಗಿನ 12 ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಕೇವಲ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಭಾರತವು ಐದು ಬಾರಿಯ ಚಾಂಪಿಯನ್‌ಗಳ ವಿರುದ್ಧ ಮತ್ತೊಂದು ಗೆಲುವು ಪಡೆಯಲು ಅತ್ಯುತ್ತಮ ತಂಡವಾಗಿ ಇರಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.
ಚೆನ್ನೈನಲ್ಲಿ ಮಳೆಯಿಂದ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಆಕಾಶ್ ಚೋಪ್ರಾ, "ಭಾರತದ ಮೊದಲ ಪಂದ್ಯವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಚೆನ್ನೈನಲ್ಲಿ ಮಳೆಯಾಗುತ್ತದೆ. ಹಾಗಾಗಿ ಚೆನ್ನೈನ ಪಂದ್ಯಗಳ ಮೇಲೆ ಮಳೆ ಪರಿಣಾಮ ಬೀರಬಹುದು ಎಂದು ನಾನು ಭಾವಿಸುತ್ತೇನೆ. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಖಂಡಿತವಾಗಿಯೂ ಅಲ್ಲಿ ಮಳೆಯಾಗುತ್ತದೆ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಇನ್ನು ದೆಹಲಿಯಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಭಾರತದ ಎರಡನೇ ಪಂದ್ಯದ ಕುರಿತು ಮಾತನಾಡಿದ ಆಕಾಶ್ ಚೋಪ್ರಾ, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರಂತಹ ಬೌಲರ್‌ಗಳು ಭಾರತಕ್ಕೆ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದರೂ ಭಾರತ ತಂಡ ಅಂತಿಮವಾಗಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
"ಭಾರತ ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡುತ್ತದೆ. ಅಫ್ಘಾನಿಸ್ತಾನದ ಬೌಲಿಂಗ್ ತೊಂದರೆ ನೀಡುವ ತಂಡವಾಗಿದೆ. ಅವರು ಅಷ್ಟು ಸುಲಭವಾಗಿ ರನ್ ಹೊಡೆಯುವುದಿಲ್ಲ. ಆದರೆ ನೂರ್ ಅಹ್ಮದ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಬೌಲಿಂಗ್ ಪರಿಣಾಮಕಾರಿಯಾಗಿರಲಿದೆ. ಈ ಎಲ್ಲದರ ಹೊರತಾಗಿಯೂ ಭಾರತ ಈ ಪಂದ್ಯವನ್ನು ಗೆಲ್ಲುತ್ತದೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.