World Cup 2023: ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಹೆದರಿ ಐಸಿಸಿಗೆ ದೂರು ನೀಡಿದ ಪಿಸಿಬಿ ಕ್ರಮವನ್ನು ಟೀಕಿಸಿದ ಪಾಕ್ ಕ್ರಿಕೆಟಿಗ
ಕಳೆದ ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ವಿಶ್ವಕಪ್‌ನಲ್ಲಿ ತನ್ನ ಅಜೇಯ ದಾಖಲೆ ಮುಂದುವರೆಸಿತು. 1.20 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಅಪಾರ ಬೆಂಬಲದ ಮಧ್ಯೆ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿತು.
ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಹಲವು ಆರೋಪಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮಂಗಳವಾರ ದೂರು ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ವಾಗ್ದಾಳಿ ನಡೆಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡದ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತೀಯ ಪ್ರೇಕ್ಷಕರಿಂದ ಸ್ವೀಕರಿಸಿದ ಅವಮಾನವು ಪಿಸಿಬಿಯ ಪ್ರಮುಖ ಆರೋಪಗಳಲ್ಲಿ ಒಂದಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ ಅಪರೂಪದ ಹಿಂದೂ ಆಟಗಾರರಲ್ಲಿ ಒಬ್ಬರಾಗಿರುವ ದಾನಿಶ್ ಕನೇರಿಯಾ, ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಭಾರತ ಮತ್ತು ಹಿಂದೂಗಳ ವಿರುದ್ಧ ಕಾಮೆಂಟ್ ಮಾಡಲು ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರಿಗೆ ಹೇಳಿದ್ದು ಯಾರು? ಐಸಿಸಿ ಟೂರ್ನಿಯನ್ನು ಬಿಸಿಸಿಐ ಕಾರ್ಯಕ್ರಮ ಎಂದು ಕರೆಯಲು ಮಿಕ್ಕಿ ಆರ್ಥರ್ ಅವರನ್ನು ಯಾರು ಕೇಳಿದರು? ಆಟದ ಮೈದಾನದಲ್ಲಿ ನಮಾಜ್ ಮಾಡಲು ಮೊಹಮ್ಮದ್ ರಿಜ್ವಾನ್‌ರಿಗೆ ಯಾರು ಹೇಳಿದರು? ಇತರರಲ್ಲಿ ತಪ್ಪುಗಳನ್ನು ಕಂಡುಹಿಡಿಯಬೇಡಿ," ದಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.
ಪಿಸಿಬಿ ಮಂಗಳವಾರ ಐಸಿಸಿಗೆ ಹಲವು ಲಿಖಿತ ದೂರುಗಳನ್ನು ನೀಡಿದೆ. "ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು 2023ರ ವಿಶ್ವಕಪ್‌ಗಾಗಿ ಪಾಕಿಸ್ತಾನ ಅಭಿಮಾನಿಗಳಿಗೆ ವೀಸಾ ನೀತಿಯಿಂದ ಅವರ ಅನುಪಸ್ಥಿತಿಯ ಬಗ್ಗೆ ಐಸಿಸಿಗೆ ಮತ್ತೊಂದು ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ," ಎಂದು ಪಿಸಿಬಿ ತಿಳಿಸಿದೆ.

"ಅಕ್ಟೋಬರ್ 14ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ತಂಡವನ್ನು ಗುರಿಯಾಗಿಟ್ಟುಕೊಂಡು ಪ್ರೇಕ್ಷಕರ ಅನುಚಿತ ವರ್ತನೆಯ ಬಗ್ಗೆಯೂ ಪಿಸಿಬಿ ದೂರು ದಾಖಲಿಸಿದೆ," ಎಂದು ಪಿಸಿಬಿ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ.
ಭಾರತ ವಿರುದ್ಧ ಸೋತ ನಂತರ, ಪಾಕಿಸ್ತಾನದ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣದಲ್ಲಿ ತಮ್ಮ ತಂಡಕ್ಕೆ ಸಾಕಷ್ಟು ಬೆಂಬಲ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಪಂದ್ಯದ ನಂತರ ಮೂರು ದಿನಗಳ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ಸಲ್ಲಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದೆ.
ಇದಲ್ಲದೆ, ಪಾಕಿಸ್ತಾನಿ ಪತ್ರಕರ್ತರಿಗೆ ಮುಂದೂಡಲ್ಪಟ್ಟ ವೀಸಾ ನೀಡಿಕೆ ಮತ್ತು ಅಭಿಮಾನಿಗಳಿಗೆ ಸ್ಪಷ್ಟವಾದ ವೀಸಾ ನೀತಿಯ ಕೊರತೆಯ ಬಗ್ಗೆ ಪಿಸಿಬಿ ಹೆಚ್ಚುವರಿ ಔಪಚಾರಿಕ ದೂರು ದಾಖಲಿಸಿದೆ.
"ಇದು ಕ್ರೂರವಾಗಿ, ಪ್ರಾಮಾಣಿಕ ಹೇಳುವುದಾದರೆ ಐಸಿಸಿ ಪಂದ್ಯದಂತೆ ತೋರುತ್ತಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ಕಾಣುತ್ತದೆ, ಇದು ಬಿಸಿಸಿಐ ಕಾರ್ಯಕ್ರಮದಂತೆ ತೋರುತ್ತಿದೆ. "ದಿಲ್ ದಿಲ್ ಪಾಕಿಸ್ತಾನ್' ಇವತ್ತು ರಾತ್ರಿ ಮೈಕ್‌ನಲ್ಲಿ ಆಗಾಗ ಬರುತ್ತಿರುವುದೂ ನನಗೆ ಕೇಳಿಸಲಿಲ್ಲ".
"ಅಭಿಮಾನಿಗಳ ಬೆಂಬಲವೂ ಒಂದು ಪಾತ್ರವನ್ನು ವಹಿಸುತ್ತದೆ. ಆದರೆ ನಾನು ಸೋಲನ್ನು ಕ್ಷಮಿಸಲು ಹೋಗುವುದಿಲ್ಲ. ಏಕೆಂದರೆ ನಮಗೆ ಪಂದ್ಯವನ್ನು ಆಡುವ ಬಗ್ಗೆ ಮಾತ್ರ ಗಮನವಿರಬೇಕು. ಅದು ಮುಂದಿನ ಬಾಲ್ ಬಗ್ಗೆ ಮತ್ತು ನಾವು ಎದುರಾಳಿಯನ್ನು ಹೇಗೆ ಎದುರಿಸಲಿದ್ದೇವೆ ಎಂಬುದರ ಬಗ್ಗೆ. ಇಂದು ರಾತ್ರಿ ಭಾರತೀಯ ಆಟಗಾರರು ಅದನ್ನು ಮಾಡಿದರು," ಎಂದು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications