AUS vs AFG: ನೋವಿನ ನಡುವೆಯೂ ದ್ವಿಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್; ಆಸೀಸ್ ಸೆಮಿಸ್‌ಗೆ; ಆಫ್ಘಾನ್ ಮನೆಗೆ!
ಮಂಗಳವಾರ, ನವೆಂಬರ್ 7ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ರೋಮಾಂಚಕ 39ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ ವಿರುದ್ಧ ದಾಖಲೆಯ ರನ್ ಚೇಸ್ ಮಾಡಿ ಗೆಲುವು ದಾಖಲಿಸಿತು.
ನೋವಿನ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ವೀರಾವೇಶದ ಹೋರಾಟ ನಡೆಸಿ, ದಾಖಲೆಯ ದ್ವಿಶತಕ ಸಿಡಿಸಿದರು ಮತ್ತು ತಮ್ಮ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು.

ಈ ಮೂಲಕ ಭಾರತ, ದಕ್ಷಿಣ ಆಫ್ರಿಕಾ ನಂತರ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೂರನೇ ತಂಡವೆನಿಸಿತು. ಇದೇ ವೇಳೆ ಅಫ್ಘಾನಿಸ್ತಾನ ತಂಡದ ಸೆಮಿಫೈನಲ್ ಆಸೆ ಬಹುತೇಕ ಕಮರಿದಂತಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಇಬ್ರಾಹಿಂ ಝದ್ರಾನ್ ಅವರ ಭರ್ಜರಿ ಶತಕ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿತ್ತು.
292 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸುವ ಮೂಲ 3 ವಿಕೆಟ್‌ಗಳ ಅಂತರದ ರೋಚಕ ಗೆಲುವು ಸಾಧಿಸಿತು.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವಿಶ್ವದಾಖಲೆಯ ಚೊಚ್ಚಲ ದ್ವಿಶತಕ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡಕ್ಕೆ ಏಕಾಂಗಿ ಹೋರಾಟ ನಡೆಸಿ ನಿಜವಾದ ಹೀರೋ ಆದರು. ತಮ್ಮ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ 128 ಎಸೆತಗಳನ್ನು ಎದುರಿಸಿ 21 ಬೌಂಡರಿಗಳು ಹಾಗೂ 10 ಭರ್ಜರಿ ಸಿಕ್ಸರ್‌ಗಳ ಸಮೇತ 201 ರನ್‌ಗಳ ಅಮೋಘ ದ್ವಿಶತಕ ಬಾರಿಸಿದರು.

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭ ನೀಡಲಿಲ್ಲ. ತಂಡದ ಮೊತ್ತ 4 ರನ್‌ಗಳಾಗಿದ್ದಾಗ ಖಾತೆ ತೆರೆಯದ ಟ್ರಾವಿಸ್ ಹೆಡ್ ಔಟಾದರು. ನಂತರ 43 ರನ್‌ಗಳಾಗಿದ್ದಾಗ ಡೇವಿಡ್ ವಾರ್ನರ್ ಕೂಡ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಕ್ರೀಸ್‌ಗೆ ಬಂದ ಮಿಚೆಲ್ ಮಾರ್ಷ್ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 24 ರನ್ ಗಳಿಸಿದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜೋಶ್ ಇಂಗ್ಲಿಸ್ ಸೊನ್ನೆ ಸುತ್ತಿದರು. ಈ ವೇಳೆ ಕ್ರೀಸ್‌ಗೆ ಆಗಮಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಇಡೀ ಇನ್ನಿಂಗ್ಸ್ ಅನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದರು.
ನಾಯಕ ಪ್ಯಾಟ್ ಕಮ್ಮಿನ್ಸ್ ಜೊತೆಗೂಡಿ ಗ್ಲೆನ್ ಮ್ಯಾಕ್ಸ್‌ವೆಲ್ ಮುರಿಯದ 8ನೇ ವಿಕೆಟ್‌ಗೆ 202 ರನ್‌ಗಳ ದಾಖಲೆಯ ಜೊತೆಯಾಟ ನಿರ್ಮಿಸಿದರು. ಈ ವೇಳೆ ಪ್ಯಾಟ್ ಕಮ್ಮಿನ್ಸ್ ಗಳಿಸಿದ್ದು ಕೇವಲ 12 ರನ್‌ಗಳು ಮಾತ್ರ ಎಂಬುದು ಗಮನಾರ್ಹ.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಬೌಲರ್‌ಗಳು ಆರಂಭದಲ್ಲಿ ಯಶಸ್ಸು ಸಾಧಿಸಿದರೂ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ನೀಡಿದ ಎರಡು ಜೀವದಾನಗಳಿಗೆ ಬೆಲೆತೆರಬೇಕಾಯಿತು. ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ ಮತ್ತು ನವೀನ್-ಉಲ್-ಹಕ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ಇನ್ನಿಂಗ್ಸ್ ಆರಂಭಿಸಿದ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಉತ್ತಮ ಆರಂಭ ನೀಡಲು ಪ್ರಯತ್ನಿಸಿದರು. ಆದರೆ ತಂಡದ ಮೊತ್ತ 38 ರನ್‌ಗಳಾಗಿದ್ದಾಗ ರಹಮಾನುಲ್ಲಾ ಗುರ್ಬಾಜ್ 25 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು.
ನಂತರ ಬಂದ ರಹಮತ್ ಷಾ ಕೂಡ ಆಸೀಸ್ ಬೌಲರ್‌ಗಳಿಗೆ ಪ್ರತಿರೋಧ ತೋರಿ 44 ಎಸೆತಗಳಲ್ಲಿ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಹಶ್ಮತುಲ್ಲಾ ಶಾಹಿದಿ 43 ಎಸೆತಗಳಲ್ಲಿ 26 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆ ಬಳಿಕ ಅಜ್ಮತುಲ್ಲಾ ಒಮರ್ಜಾಯ್ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 22 ರನ್ ಗಳಿಸಿದರೆ, ಮೊಹಮ್ಮದ್ ನಬಿ 10 ಎಸೆತಗಳಲ್ಲಿ 1 ಸಿಕ್ಸರ್ ಮೂಲಕ 12 ರನ್ ಗಳಿಸಿ ಔಟಾದರು.
ಇನ್ನು ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಬ್ರಾಹಿಂ ಝದ್ರಾನ್ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ ಅಜೇಯ 129 ರನ್ ಬಾರಿಸಿದರು. ಇನ್ನು ಇಬ್ರಾಹಿಂ ಝದ್ರಾನ್ ಅವರಿಗೆ ಉತ್ತಮ ಸಾಥ್ ನೀಡಿದ ರಶೀದ್ ಖಾನ್ 18 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ 35 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್ 9 ಓವರ್‌ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 9 ಓವರ್‌ಗಳಲ್ಲಿ 70 ರನ್ ನೀಡಿ 1 ವಿಕೆಟ್ ಕಬಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications