ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದೇ ವೇಳೆ ಭಾರತ ತಂಡದ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ಭಾರತದ ಮಾಜಿ ಆಫ್ ಸ್ಪಿನ್ನರ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಹರ್ಭಜನ್ ಸಿಂಗ್ ಅವರು ಭಾರತ ತಂಡದ ಆಯ್ಕೆ ಕುರಿತು ಮಾತನಾಡಿದ್ದಾರೆ.

ಭಾರತದ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಯಾವುದೇ ಬೆಲೆ ತೆತ್ತಾದರೂ ಭಾರತ ತಂಡದ ಆಡುವ 11ರ ಬಳಗದ ಭಾಗವಾಗಿಸಬೇಕೆಂದು ಬಯಸಿದ್ದಾರೆ.
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ ತಂಡದ ಸ್ಟಾರ್ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ದಾಖಲೆಯನ್ನು ಹೊಂದಿದ್ದಾರೆ. ಆದರೆ ಇನ್ನೂ ಅವರ ಕ್ರಿಯಾತ್ಮಕ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸದ್ಯದ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್ ಮತ್ತು ಸ್ಥಾನ ವಂಚಿತ ಸಂಜು ಸ್ಯಾಮ್ಸನ್ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿವೆ. ಬಹುತೇಕರು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದೆ, ಸೂರ್ಯಕುಮಾರ್ ಯಾದವ್‌ರನ್ನು ಆಯ್ಕೆ ಮಾಡಿದ್ದಕ್ಕೆ ಭಾರತೀಯ ಆಯ್ಕೆ ಸಮಿತಿಯನ್ನು ಟೀಕಿಸುತ್ತಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬಲಗೈ ಬ್ಯಾಟರ್ ಉತ್ತಮ ರನ್ ಗಳಿಸಿಲ್ಲವಾದರೂ, ಸಂಜು ಸ್ಯಾಮ್ಸನ್ ಅವರಿಗಿಂತ ಸೂರ್ಯಕುಮಾರ್ ಯಾದವ್‌ಗೆ ಏಕೆ ಆದ್ಯತೆ ನೀಡಲಾಗಿದೆ ಎಂಬುದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಕಾರಣ ನೀಡಿದೆ.
32 ವರ್ಷದ ಸೂರ್ಯಕುಮಾರ್ ಅವರನ್ನು ವಿಶ್ವಕಪ್ 2023ರ ಭಾರತ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗಿಂತ ಮೊದಲು ಆಯ್ಕೆ ಮಾಡಿದಾಗ ಚರ್ಚೆ ತೀವ್ರಗೊಂಡಿದೆ.
ಸ್ಟಾರ್ ಸ್ಪೋರ್ಟ್ಸ್ ಇತ್ತೀಚೆಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸೂರ್ಯಕುಮಾರ್ ಯಾದವ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ ಹರ್ಭಜನ್ ಸಿಂಗ್, "ಸೂರ್ಯಕುಮಾರ್ ಯಾದವ್ ಅವರು ಪರಿಪೂರ್ಣ ಆಟಗಾರ ಎಂದು ನಾನು ಭಾವಿಸುತ್ತೇನೆ. ಸಂಜು ಸ್ಯಾಮ್ಸನ್ ಮೇಲೆ ಆಯ್ಕೆಗಾರರು ಕಟುವಾಗಿ ವರ್ತಿಸಿದ್ದಾರೆಂದು ನನಗನಿಸುವುದಿಲ್ಲ," ಎಂದರು.
"ಹೌದು. ನನ್ನ ಭಾವನೆ, ಸಂಜು ಸ್ಯಾಮ್ಸನ್ ಒಬ್ಬ ಗುಣಮಟ್ಟದ ಆಟಗಾರ. ಆದರೆ ನೀವು ಕೇವಲ 15 ಜನರನ್ನು ಮಾತ್ರ ಆಯ್ಕೆ ಮಾಡಬೇಕಿದೆ ಮತ್ತು ಸಂಜು ಸ್ಯಾಮ್ಸನ್‌ಗಿಂತ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡುವುದು ಸರಿಯಾದ ಕ್ರಮವಾಗಿದೆ ಎಂದು ನಾನು ಭಾವಿಸುತ್ತೇನೆ," ಎಂದು ಲೆಜೆಂಡ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟರು.
"ಮಧ್ಯಮ ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಹೊಂದಿರುವ ಆಟವನ್ನು ಬಹುಶಃ ಸಂಜು ಸ್ಯಾಮ್ಸನ್ ಇನ್ನೂ ಹೊಂದಿಲ್ಲ. ಸೂರ್ಯಕುಮಾರ್ ಯಾದವ್ ನಿಮಗೆ ವಿಶ್ವಾಸಾರ್ಹತೆಯನ್ನು ನೀಡುತ್ತಾರೆ ಮತ್ತು ಇನ್ನಿಂಗ್ಸ್‌ನ ಕೊನೆಯಲ್ಲಿ ದೊಡ್ಡ ಸ್ಕೋರ್‌ಗಳನ್ನು ಮಾಡಬಹುದು, ಆದರೆ ಸಂಜು ಸ್ಯಾಮ್ಸನ್ ಹೆಚ್ಚಿನ ಅಪಾಯದ ಕ್ರಿಕೆಟ್ ಆಡುತ್ತಾರೆ," ಎಂದು ಹರ್ಭಜನ್ ಸಿಂಗ್ ತಿಳಿಸಿದರು.
2023ರ ಏಕದಿನ ವಿಶ್ವಕಪ್ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.