2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಗೆ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.
ಇದೇ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸದ ಕಾರಣ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ ಪಂದ್ಯಾವಳಿಯು ವಿವಾದಕ್ಕೆ ಒಳಗಾಗಿತ್ತು. ಆದರೆ ವರದಿಗಳ ಪ್ರಕಾರ, ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡ ಭಾರತಕ್ಕೆ ಬರಲಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, 2023ರ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ನಡುವೆ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ಪಂದ್ಯಗಳನ್ನು ಆಡಲು ಇಷ್ಟಪಡದ ಪಾಕಿಸ್ತಾನ ತಂಡವು ತಮ್ಮ ಹೆಚ್ಚಿನ ಪಂದ್ಯಗಳನ್ನು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಆಡಲಿದೆ. ಆದರೆ, ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ಅಹಮದಾಬಾದ್‌ನಲ್ಲೇ ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ಭಾರತ ತಂಡದ ಇತರ ಪ್ರಮುಖ ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿವೆ. ಮತ್ತೊಂದೆಡೆ, ಭಾರತ ತಂಡ ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದೆ. ಲಕ್ನೋ ಮೈದಾನ ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಜೂನ್ 18ರಿಂದ ಜಿಂಬಾಬ್ವೆಯಲ್ಲಿ ಪ್ರಾರಂಭವಾಗಲಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳ ಮೂಲಕ ಎರಡು ತಂಡಗಳು ಪ್ರಮುಖ ಪಂದ್ಯಾವಳಿಗೆ ಪ್ರವೇಶ ಪಡೆಯಲಿವೆ. ಮುಂಬರುವ ಕೆಲವು ವಾರಗಳಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಗಮನಾರ್ಹ ಅಂಶವೆಂದರೆ, ಭಾರತವು ಇದು ನಾಲ್ಕನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಭಾರತ ಈ ಮೊದಲು 1987, 1996 ಮತ್ತು 2011ರ ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸಿತ್ತು.

ಟೀಂ ಇಂಡಿಯಾ 1987 ಮತ್ತು 1996ರ ಆವೃತ್ತಿಗಳಲ್ಲಿ ಸೆಮಿಫೈನಲ್ ಹಂತ ತಲುಪಲು ಯಶಸ್ವಿಯಾಗಿದ್ದರೆ, ಎಂಎಸ್ ಧೋನಿ ನಾಯಕತ್ವದಲ್ಲಿ 2011ರ ವಿಶ್ವಕಪ್ ಗೆದ್ದು ಬೀಗಿತ್ತು.
ನಂತರ 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯ ಗಳಿಸಿದ ನಂತರ, ಭಾರತವು ಹತ್ತು ವರ್ಷಗಳಿಂದ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಆದ್ದರಿಂದ ಮುಂಬರುವ 2023 ಏಕದಿನ ವಿಶ್ವಕಪ್ ಪಂದ್ಯಾವಳಿಯು ಭಾರತ ತಂಡಕ್ಕೆ ತವರು ನೆಲದಲ್ಲಿ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ದೊಡ್ಡ ಅವಕಾಶವಾಗಿದೆ.