ಇದೇ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ಸೇರಿದಂತೆ ಹಲವು ತಂಡಗಳು ತಮ್ಮ ತಂಡಗಳನ್ನು ಸಜ್ಜುಗೊಳಿಸುತ್ತಿವೆ ಮತ್ತು ಅತ್ಯುತ್ತಮ ಆಡುವ ಹನ್ನೊಂದರ ಬಳಗಕ್ಕಾಗಿ ಪೂರ್ವ ತಯಾರಿ ನಡೆಸುತ್ತಿವೆ.
ಸದ್ಯ ಭಾರತದಲ್ಲಿ ಐಪಿಎಲ್ ಜ್ವರ ಹೆಚ್ಚಾಗಿದ್ದು, ವಿಶ್ವದ ಶ್ರೀಮಂತ ಟಿ20 ಲೀಗ್ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಮಾರ್ಚ್ 31ರಂದು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯದ ಮೂಲಕ 16ನೇ ಐಪಿಎಲ್ ಋತುವಿಗೆ ಚಾಲನೆ ಸಿಗಲಿದ್ದು, ಮೇ 28ರಂದು ಅಂತಿಮ ಹಣಾಹಣಿ ನಡೆಯಲಿದೆ.

ಇದಾದ ನಂತರ ದಿ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಆ ಬಳಿಕ ಭಾರತ ತಂಡ ಕೆಲವು ದ್ವಿಪಕ್ಷೀಯ ಸರಣಿಗಳಲ್ಲಿ ಆಡಿದ ನಂತರ, ಸೆಪ್ಟೆಂಬರ್‌ನಲ್ಲಿ ನಡೆಯುವ ಆರು ರಾಷ್ಟ್ರಗಳ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗಾಗಿ ಸ್ಥಳ ನಿಗದಿಪಡಿಸಿದೆ ಎನ್ನಲಾಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಮತ್ತು ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಒಂದನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತದಲ್ಲಿಯೇ ಸಂಪೂರ್ಣ ವಿಶ್ವಕಪ್ ಆಯೋಜನೆ ಹಕ್ಕು ಪಡೆದುಕೊಂಡಿದ್ದು, ಒಟ್ಟು 48 ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಿದ್ದು, ತಲಾ ನಾಲ್ಕು ಪಂದ್ಯಗಳನ್ನು ಆಡುವ ಸಂಭಾವ್ಯ 12 ವಿಭಿನ್ನ ಸ್ಥಳಗಳನ್ನು ಈಗಾಗಲೇ ಪಟ್ಟಿ ಮಾಡಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗಾಗಿ ಇನ್ನೂ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೂ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ 1.30 ಲಕ್ಷ ಜನರ ಆಸನ ಸಾಮರ್ಥ್ಯ ಹೊಂದಿರುವ ಕಾರಣ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಆಯೋಜಿಸಲು ಸೂಕ್ತ ಸ್ಥಳವಾಗಿದೆ. ಅದಕ್ಕೂ ಮುನ್ನ ಇದೇ ಸ್ಥಳದಲ್ಲಿ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. ಆದರೆ, ಈ ಬಾರಿ ಎರಡು ಸೆಮಿಫೈನಲ್‌ಗಳಲ್ಲಿ ಒಂದು ಪಂದ್ಯಕ್ಕೆ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಇದೇ ವೇಳೆ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಚೆನ್ನೈ ಅಥವಾ ದೆಹಲಿ ಆತಿಥ್ಯ ವಹಿಸಲಿವೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶದ ಆತಿಥ್ಯ ಬಗ್ಗೆ ಚರ್ಚಿಸಿಲ್ಲ ಎಂದ ಐಸಿಸಿ
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯ ಸೇರಿದಂತೆ ಪಾಕಿಸ್ತಾನ ತಂಡದ ಪಂದ್ಯಗಳನ್ನು ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ ವರದಿಗಳು ಬಂದವು. ಆದರೆ, ಇಂತಹ ವದಂತಿಗಳನ್ನು ಬಿಸಿಸಿಐ ಮತ್ತು ಐಸಿಸಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಐಸಿಸಿ ಅಧಿಕಾರಿಯೋರ್ವರ ಪ್ರಕಾರ, ಯೋಜನೆಯಂತೆ ಭಾರತದಲ್ಲಿಯೇ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.