ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ದಿನಗಣನೆ ಆರಂಭವಾಗಿದೆ. ಈಗಾಗಲೇ ಜೂನ್ 27ರಂದು ಹೆಚ್ಚು ನಿರೀಕ್ಷಿತ ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯವೂ ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯೂ ಐಸಿಸಿ ಪ್ರಕಟಿಸಿದೆ.
ವೇಳಾಪಟ್ಟಿ ಪ್ರಕಾರ, ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಾಡಲಿವೆ. ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಅಜೇಯ ಗೆಲುವಿನ ಸರಣಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ಇದೇ ವೇಳೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಸೋಲಿನ ಸರಣಿಯನ್ನು ಮುರಿಯಲು ಪ್ರಯತ್ನಿಸಲಿದೆ. ಈಗಾಗಲೇ 2021ರಲ್ಲಿ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಸೋಲಿನ ಸರಣಿಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.
ಆದರೆ, 50 ಓವರ್‌ಗಳ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಭಾರತ ತಂಡದ ವಿರುದ್ಧ ತಮ್ಮ ಮೊದಲ ಜಯವನ್ನು ಸಾಧಿಸಲು ಪಾಕಿಸ್ತಾನ ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲ ಮತ್ತು ಈ ಹಿಂದೆ ಆಡಿದ 7 ಪಂದ್ಯಗಳಲ್ಲಿ ಸೋತಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಭಾವನೆಗಳನ್ನು ಶಾದಾಬ್ ಖಾನ್ ಒಪ್ಪಿಕೊಂಡಿದ್ದಾರೆ. ಆದರೆ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೋಲಿಸುವುದು ಪಾಕಿಸ್ತಾನ ತಂಡದ ಏಕೈಕ ಆದ್ಯತೆಯಾಗುವುದಿಲ್ಲ ಎಂದು ಒತ್ತಿ ಹೇಳಿದರು.
ಪಾಕಿಸ್ತಾನ ತಂಡವು ಭಾರತ ವಿರುದ್ಧ ಸೋತರೂ ವಿಶ್ವಕಪ್ ಚಾಂಪಿಯನ್‌ಗಳಾಗಿ ಹೊರಹೊಮ್ಮುವುದು ನಮ್ಮ ಆದ್ಯತೆಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಗೆಲ್ಲುವುದಕ್ಕಿಂತ ವಿಶ್ವಕಪ್ ಗೆಲ್ಲುವುದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂದು ಆಲ್‌ರೌಂಡರ್ ಶಾದಾಬ್ ಖಾನ್ ಅಭಿಪ್ರಾಯ ನೀಡಿದ್ದಾರೆ.
"ಭಾರತ ತಂಡದ ವಿರುದ್ಧ, ವಿಶೇಷವಾಗಿ ಅವರ ತವರು ನೆಲದಲ್ಲಿ ಆಡುವುದು ವಿಶಿಷ್ಟವಾದ ಸಂತೋಷ ಮತ್ತು ಒತ್ತಡವನ್ನು ತರುತ್ತದೆ. ಆದರೆ ಭಾರತವನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ವಿಶ್ವಕಪ್‌ನಲ್ಲಿ ಸ್ಪರ್ಧಿಸುವತ್ತ ಗಮನ ಹರಿಸಬೇಕಿದೆ".
"ಭಾರತ ವಿರುದ್ಧ ಗೆಲ್ಲುವುದೇ ಅಂತಿಮ ಗುರಿಯಾಗಿದ್ದರೆ ಯಾವುದೇ ಪ್ರಯೋಜನವಿಲ್ಲ. ವಿಶ್ವಕಪ್ ಗೆಲ್ಲುವುದು ನಮ್ಮ ಗುರಿಯಾಗಿದೆ," ಎಂದು ಶಾದಾಬ್ ಖಾನ್ ಕ್ರಿಕೆಟ್ ಪಾಕಿಸ್ತಾನಕ್ಕೆ ತಿಳಿಸಿದ್ದಾರೆ.
ಶಾದಾಬ್ ಖಾನ್ ಈ ಹಿಂದೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ 2019ರ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾಗವಹಿಸಿದ್ದರು.
ಆ ಪಂದ್ಯದಲ್ಲಿ ರೋಹಿತ್ ಶರ್ಮಾ 140 ರನ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ತಲಾ ಅರ್ಧಶತಕದ ನೆರವಿನಿಂದ ಭಾರತ ತಂಡವು 7 ವಿಕೆಟ್‌ಗೆ 336 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಮಳೆ-ಬಾಧಿತ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 40 ಓವರ್‌ಗಳಲ್ಲಿ 302 ರನ್‌ಗಳ ಗುರಿ ನೀಡಲಾಗಿತ್ತು. ಭಾರತದ ಬೌಲರ್‌ಗಳು ಪಾಕಿಸ್ತಾನವನ್ನು 212 ರನ್‌ಗಳಿಗೆ ನಿಯಂತ್ರಿಸಿದರು.
ಪ್ರಸ್ತುತ ಟಿ20 ಬ್ಲಾಸ್ಟ್‌ನಲ್ಲಿ ಸಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶಾದಾಬ್ ಖಾನ್ ಎರಡು ಪಂದ್ಯ-ವಿಜೇತ ಅರ್ಧ ಶತಕಗಳೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅವರು ಮಿಡ್ಲ್‌ಸೆಕ್ಸ್ ತಂಡದ ವಿರುದ್ಧ 59 ರನ್ ಮತ್ತು ಗ್ಲಾಮೊರ್ಗಾನ್ ತಂಡದ ವಿರುದ್ಧ ಅಜೇಯ 87 ರನ್ ಬಾರಿಸಿದ್ದಾರೆ.