ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯುವ 2023ರ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ.
ಸೆಪ್ಟೆಂಬರ್ 29ರಿಂದ ಅಭ್ಯಾಸ ಪಂದ್ಯಗಳು ಆರಂಭವಾಗಲಿದ್ದು, ಭಾರತದಲ್ಲಿ ಒಂದೂವರೆ ತಿಂಗಳ ಕಾಲ ಐಸಿಸಿ ಕ್ರಿಕೆಟ್ ಹಬ್ಬ ನಡೆಯಲಿದೆ. ಇದಕ್ಕಾಗಿ ಈಗಾಗಲೇ ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತಕ್ಕೆ ಬಂದಿಳಿದಿವೆ.
ಇದೀಗ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಬುಧವಾರ, ಸೆಪ್ಟೆಂಬರ್ 27ರಂದು ಭಾರತಕ್ಕೆ ಬಂದಿಳಿದಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಿದೆ. 2016ರಲ್ಲಿ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಆಡಲು ಆಗಮಿಸಿತ್ತು.

ಸದ್ಯ ಪಾಕಿಸ್ತಾನದ ಬಹುಪಾಲು ತಂಡವು ಈ ಮೊದಲು ಭಾರತದಲ್ಲಿ ಆಡಿಲ್ಲ ಎಂಬುದು ಗಮನಾರ್ಹ. ಅವರು ಇದೀಗ ಏಕದಿನ ವಿಶ್ವಕಪ್‌ನಲ್ಲಿ ಆಡಲು ಬಂದಿರುವಾಗ ತಮ್ಮ ಕೌಶಲ್ಯ ಮತ್ತು ಮಾನಸಿಕ ಗಟ್ಟಿತನಕ್ಕೆ ಅಗ್ನಿಪರೀಕ್ಷೆಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ನೇರವಾಗಿ ಭಾರತಕ್ಕೆ ಬರದೆ, ಇಸ್ಲಾಮಾಬಾದ್‌ನಿಂದ ದುಬೈ ಮೂಲಕ ಭಾರತಕ್ಕೆ ಆಗಮಿಸಿದೆ. ಹೈದರಾಬಾದ್‌ಗೆ ಬಂದಿಳಿದಿದ್ದು, ಇಲ್ಲಿ ಅವರು ತಮ್ಮ ಮೊದಲ 2 ಏಕದಿನ ವಿಶ್ವಕಪ್ ಪಂದ್ಯಗಳನ್ನು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಆಡಲಿದ್ದಾರೆ.
ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ಹೈ-ವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ.
ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ ಪಂದ್ಯಗಳನ್ನು ನಿಗದಿಪಡಿಸುವ ಮೂಲಕ, ವಿಶ್ವಕಪ್ ತಂಡಗಳಲ್ಲಿ ಪಾಕಿಸ್ತಾನವು ಕಡಿಮೆ ಪ್ರಯಾಣ ಮಾಡುವ ತಂಡವಾಗಿದೆ. ತಮ್ಮ 9 ಗುಂಪು ಪಂದ್ಯಗಳಿಗಾಗಿ 9 ಸ್ಥಳಗಳಿಗೆ ಪ್ರಯಾಣಿಸುವ ಭಾರತ ತಂಡಕ್ಕೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ.
ಭಾರತದಲ್ಲಿ 2023ರ ವಿಶ್ವಕಪ್‌ಗೆ ಮುಂಚಿತವಾಗಿ ಪಾಕಿಸ್ತಾನ ಕ್ರಿಕೆಟ್ ತಂಡವು ವೀಸಾ ವಿಳಂಬದ ಸವಾಲುಗಳನ್ನು ಎದುರಿಸಿತು. ಪಾಕಿಸ್ತಾನ ತಂಡಕ್ಕೆ ವೀಸಾ ಮಂಜೂರಾತಿ ವಿಳಂಬವಾಯಿತು ಮತ್ತು ಇದು ಪಂದ್ಯಾವಳಿಗಾಗಿ ಅವರ ತಯಾರಿ ಯೋಜನೆಗಳಿಗೆ ಅಡ್ಡಿಪಡಿಸಿತು.
ಈ ವಿಳಂಬದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ನೀಡಿತ್ತು. ಅಲ್ಲದೆ, ಪಂದ್ಯಾವಳಿಗೆ ತಂಡದ ಸಿದ್ಧತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಅಂತಿಮವಾಗಿ ಸೆಪ್ಟೆಂಬರ್ 25ರಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯಕ್ಕಾಗಿ ತಂಡವು ಹೈದರಾಬಾದ್‌ಗೆ ನಿರ್ಗಮಿಸುವ ಎರಡು ದಿನಗಳ ಮೊದಲು ಆಟಗಾರರಿಗೆ ವೀಸಾಗಳನ್ನು ನೀಡಲಾಯಿತು.
ಪಾಕಿಸ್ತಾನ ತಂಡವು ವಿಶ್ವ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಿಯಾಗಿ 2023ರ ಏಕದಿನ ವಿಶ್ವಕಪ್‌ಗೆ ಬರುತ್ತಿದೆ. ಆದಾಗ್ಯೂ ಅವರು 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಭಾರತ ಮತ್ತು ಶ್ರೀಲಂಕಾ ವಿರುದ್ಧ ಸೋತು ಸೂಪರ್ 4 ಹಂತದಲ್ಲೇ ಹೊರಬಿದ್ದಿತು.
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್.
ಪ್ರಯಾಣ ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್