2023ರ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುತ್ತಿದೆ. ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ಹೀನಾಯ ಸ್ಥಿತಿಯಲ್ಲಿದೆ. ಈ ವಿಶ್ವಕಪ್ ನಲ್ಲಿ ಪಾಕ್ ಅನುಭವಿಸುತ್ತಿರುವ ಅವಮಾನ ಒಂದು ಕಡೆಯಾದರೆ, ಪಾಕ್ ತಂಡದ ನಾಯಕ ಬಾಬರ್ ಅಜಮ್ ಅವರನ್ನು ಪಾಕ್ ನಲ್ಲಿ ಎಲ್ಲರೂ ನಿಂದಿಸುತ್ತಿದ್ದಾರೆ.
ನಾಯಕ ಬಾಬರ್ ಅಜಮ್, ಹ್ಯಾರಿಸ್ ರೌಫ್ ಮತ್ತು ಕೋಚ್ ಮಿಕ್ಕಿ ಆರ್ಥರ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಆಡಿದೆ 5 ಪಂದ್ಯಗಳಲ್ಲಿ 3 ರಲ್ಲಿ ಸೋತಿದ್ದು, ವಿಶ್ವಕಪ್ ಸೆಮಿಫೈನಲ್ ರೇಸ್ ನಿಂದ ಬಹುತೇಕ ಹೊರಗುಳಿದಿದೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನ ತಂಡ ODI ಶ್ರೇಯಾಂಕದಲ್ಲಿ ನಂಬರ್ ಒನ್ ಆಗಿತ್ತು, ವಿಶ್ವಕಪ್ ಆರಂಭವಾದ ಬಳಿಕ ಕೆಲವು ದಿನಗಳ ಹಿಂದೆ ಕ್ರಿಕೆಟ್ ಆಡಲು ಪ್ರಾರಂಭಿಸಿದ ಆಫ್ಘನ್ನರು ಅವರನ್ನು ಸೋಲಿಸಿದರು.

ಏಷ್ಯಾ ಕಪ್ 2023 ಕ್ಕೆ ಸಿದ್ಧತೆಗಳು ನಡೆದಿದ್ದವು. ಪಾಕಿಸ್ತಾನವು ವಿಶ್ವದ ನಂಬರ್ ಒನ್ ಏಕದಿನ ತಂಡವಾಗಿತ್ತು. ಬಾಬರ್ ಅಜಮ್ ನಂಬರ್ ಒನ್ ಬ್ಯಾಟ್ಸಮ್ಯಾನ್. ಶಾಹೀನ್ ಅಫ್ರಿದಿ ವಿಶ್ವದ ಬೆಂಕಿಯಂತಹ ಚೆಂಡನ್ನು ಹೊರ ಹಾಕುವ ಬೌಲರ್.. ಹ್ಯಾರಿಸ್ ರೌಫ್ ಅವರ ಚೆಂಡು ಬಿರುಗಾಳಿಯಂತೆ ಇತ್ತು. ನಸೀಮ್ ಶಾ ಬೆಂಕಿಯ ಮಳೆಗರೆಯುತ್ತಿದ್ದರು.
ಪಾಕ್ ಮಾಜಿ ಆಟಗಾರರು ಟಿವಿ ಚಾನೆಲ್ ಗಳ ಚರ್ಚೆಗಳಲ್ಲಿ ಬಾಬರ್ ಸೈನ್ಯ ಭಾರತವನ್ನು ಸೋಲಿಸುತ್ತದೆ ಎಂದು ಜೋರಾಗಿ ಹೇಳುತ್ತಿದ್ದರು. 2021ರ ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿತ್ತು, ಇದರಿಂದ ಅವರ ಆತ್ಮವಿಶ್ವಾಸ ಉತ್ತುಂಗದಲ್ಲಿತ್ತು.
ಸೆಪ್ಟೆಂಬರ್ 10 ರಂದು, ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕ್ 228 ರನ್ ಗಳಿಂದ ಭಾರತದ ವಿರುದ್ಧ ಸೋಲು ಕಂಡಿತು. ಅದಾದ ನಂತರ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಲ್ಲಿಂದ ಶುರುವಾಯಿತು ಪಾಕಿಸ್ತಾನ ತಂಡದ ಸಂಕಷ್ಟ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿಯೇ ಬಾಬರ್ ಸೇನೆಯು ಭಾರತಕ್ಕೆ ಬಂದಿತು ಮತ್ತು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋತಿತ್ತು.
ಅಭ್ಯಾಸ ಪಂದ್ಯದಲ್ಲಿ ಪಾಕ್ ಬೌಲರ್ ಗಳು ಧಾರಾಳವಾಗಿ ರನ್ ನೀಡಿ ಕೈ ಸುಟ್ಟುಕೊಂಡರು. ಇಲ್ಲಿಂದ ಇವರ ಆತ್ಮ ವಿಶ್ವಾಸ ಕೊಂಚ ಕುಗ್ಗಿತು. ಇದರ ನಂತರ, ವಿಶ್ವಕಪ್ ನಲ್ಲಿ ಪಾಕಿಸ್ತಾನಕ್ಕೆ ಎರಡು ಸುಲಭ ಪಂದ್ಯಗಳು ಇದ್ದವು. ಇದರ ಹೊರತಾಗಿಯೂ ನೆದರ್ಲೆಂಡ್ಸ್ ವಿರುದ್ಧ ಗೆಲ್ಲಲು ಹೋರಾಟ ನಡೆಸಬೇಕಾಯಿತು, ಆದರೆ ಗಾಯಗಳಿಂದ ಬಳಲುತ್ತಿದ್ದ ಶ್ರೀಲಂಕಾ ವಿರುದ್ಧ ಬಹಳ ಕಷ್ಟದಿಂದ ಗೆದ್ದಿತು.
ಭಾರತದ ವಿರುದ್ಧ ಪಂದ್ಯಕ್ಕೂ ಮೊದಲು ಪಾಕ್ ಬಣ್ಣ ಅರ್ಧ ಬಯಲಾಗಿತ್ತು. ಅಹಮದಾಬಾದ್ ನ 1.25 ಲಕ್ಷ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿದ ಕ್ರೀಡಾಂಗಣದಲ್ಲಿ ರೋಹಿತ್ ಸೇನೆಯು ಪಾಕಿಸ್ತಾನವನ್ನು 191 ರನ್ ಗಳಿಗೆ ಆಲೌಟ್ ಮಾಡಿ 3 ವಿಕೆಟ್ ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು.
ವಿಶ್ವಕಪ್ ನಲ್ಲಿ ಅಷ್ಟಾಗಿ ಲಯದಲ್ಲಿ ಇಲ್ಲದ ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿತು. ಇದು ಪಾಕಿಸ್ತಾನದ ಕಥೆ ಈ ವಿಶ್ವಕಪ್ ನಲ್ಲಿ ಮುಗಿಯಿತು ಎಂಬುದನ್ನು ಸೂಚಿಸುವಂತೆ ಇತ್ತು. ಇನ್ನು ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಘಾತ ತಂಡಕ್ಕೆ ನುಂಗಲಾರದ ಬಿಸಿ ತುಪ್ಪದಂತೆ ಆಯಿತು.
ಪಾಕಿಸ್ತಾನ ವಿಶ್ವಕಪ್ ನಲ್ಲಿ ಪುಟಿದೇಳಲು ಸಾಧ್ಯ ಇದೆಯಾ? ಪಾಕ್ ತಂಡ ಇನ್ನೂ ಸೆಮಿಫೈನಲಿಗೆ ತಲುಪಬಹುದೇ ಮತ್ತು ಅಂತಿಮವಾಗಿ, ಬಾಬರ್ ಅಜಮ್ ನಾಯಕತ್ವ ತ್ಯಜಿಸುತ್ತಾರಾ ಎಂಬ ಪ್ರಶ್ನೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.