ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ನೀಡಿದ 205 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 7 ವಿಕೆಟ್‌ಗಳ ಅಂತರದ ಭಾರೀ ಗೆಲುವು ಸಾಧಿಸಿದೆ. ಈ ಮೂಲಕ ಸತತ ನಾಲ್ಕು ಸೋಲುಗಳ ಬಳಿಕ ಪಾಕಿಸ್ತಾನ ತಂಡ ಮೊದಲ ಗೆಲುವು ಸಾಧಿಸಿದೆ. ಈ ಮೂಲಕ ಬಾಬರ್ ಅಜಂ ಪಡೆ ಮತ್ತೊಮ್ಮೆ ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದೆ.
ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಮೂರನೇ ಗೆಲುವು ಸಾಧಿಸಿದ್ದು ಪ್ರಸ್ತುತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈಗ ಪಾಕಿಸ್ತಾನ ತಂಡ ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಕ್ಕಿಂತ ಕೇವಲ ಎರಡು ಅಂಕಗಳಷ್ಟು ಮಾತ್ರವೇ ಹಿಂದುಳಿದಿದೆ. ಆದರೆ ಗಮನಾರ್ಹ ಅಂಶವೆಂದರೆ ಈ ಎರಡು ತಂಡಗಳಿಗಿಂತಲೂ ಪಾಕಿಸ್ತಾನ ತಂಡ ಒಂದು ಹೆಚ್ಚು ಪಂದ್ಯವನ್ನು ಆಡಿದೆ.

ಸೆಮಿಫೈನಲ್ ಕನಸು ಕಷ್ಟ
ಹೀಗಿದ್ದರೂ ಪಾಕಿಸ್ತಾನ ತಂಡದ ಸೆಮಿಫೈನಲ್‌ಗೇರುವ ಅವಕಾಶ ಬಹಳ ಕ್ಷೀಣವಾಗಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಕೆಲ ಪಂದ್ಯಗಳ ಫಲಿತಾಂಶಗಳು ಪಾಕ್ ತಂಡಕ್ಕೆ ಅನುಕೂಲಕರವಾದ ರೀತಿಯಲ್ಲಿ ಬರಬೇಕಾಗಿದೆ. ಹೀಗಾದಲ್ಲಿ ಮಾತ್ರವೇ ಪಾಕ್ ತಂಡದ ಸೆಮಿಫೈನಲ್ ಕನಸು ನನಸಾಗಲು ಸಾಧ್ಯ.
ಪಾಕ್ ಮುಂದೆ ಕಠಿಣ ಸವಾಲು
ಇನ್ನು ಪಾಕಿಸ್ತಾನ ತಂಡದ ಸೆಮಿಫೈನಲ್ ಕನಸು ನನಸಾಗಲು ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಟೂರ್ನಿಯ ಬಲಿಷ್ಠ ತಂಡಗಳ ಪೈಕಿ ಒಂದಾಗಿರುವ ನ್ಯೂಜಿಲೆಂಡ್ ತಂಡ ಎದುರಾಳಿಯಾಗಿರಲಿದ್ದು ಬೆಂಗಳೂರಿನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.
ಬಾಂಗ್ಲಾದೇಶದ ಹೋರಾಟ ಅಂತ್ಯ
ಮತ್ತೊಂದೆಡೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬಾಂಗ್ಲಾದೇಶ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಈ ಪಂದ್ಯದಲ್ಲಿಯೂ ಸೋಲು ಅನುಭವಿಸುವ ಮೂಲಕ ಬಾಂಗ್ಲಾದೇಶ ತಂಡ ಸೆಮಿಫೈನಲ್ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಬಾಂಗ್ಲಾದೇಶ ಏಳು ಪಂದ್ಯಗಳನ್ನು ಆಡಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಲು ಸಾಧ್ಯವಾಗಿದೆ. ಎರಡು ಅಂಕಗಳನ್ನು ಮಾತ್ರವೇ ಪಡೆದುಕೊಂಡಿದ್ದು ತನ್ನ ಸೆಮಿಫೈನಲ್ ಕನಸು ಭಗ್ನಗೊಳಿಸಿಕೊಂಡಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಅಧಿಕೃತವಾಗಿ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.