World Cup 2023 Qualifiers: ಕೊನೇ ಪಂದ್ಯವನ್ನು ಸೋತ ವಿಂಡೀಸ್; ಫೈನಲ್‌ನಲ್ಲಿ ಶ್ರೀಲಂಕಾ vs ನೆದರ್ಲ್ಯಾಂಡ್ಸ್
ಶುಕ್ರವಾರ, ಜುಲೈ 7ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಸೂಪರ್ 6 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಶ್ರೀಲಂಕಾ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಈಗಾಗಲೇ ವಿಶ್ವಕಪ್ ರೇಸ್‌ನಿಂದ ಹೊರಬಿದ್ದಿರುವ ವೆಸ್ಟ್ ಇಂಡೀಸ್ ತಂಡ ಅರ್ಹತಾ ಪಂದ್ಯಾವಳಿಯ ಕೊನೆಯ ಪಂದ್ಯದಲ್ಲೂ ಸೋಲು ಕಂಡಿತು. ಇನ್ನು ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಶ್ರೀಲಂಕಾ ಫೈನಲ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 48.1 ಓವರ್‌ಗಳಲ್ಲಿ 243 ರನ್‌ಗಳಿಗೆ ಆಲೌಟ್ ಆಯಿತು. 244 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 44.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.

ಶ್ರೀಲಂಕಾ ತಂಡದ ಪರ ಆರಂಭಿಕ ಪಾಥುಮ್ ನಿಸ್ಸಾಂಕ 113 ಎಸೆತಗಳಲ್ಲಿ 14 ಬೌಂಡರಿ ಸಮೇತ 104 ರನ್‌ಗಳ ಶತಕ ಪೂರೈಸಿದರೆ, ದಿಮುತ್ ಕರುಣಾರತ್ನೆ 92 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 83 ರನ್ ಗಳಿಸಿದರು. ನಂತರ ಬಂದ ಕುಸಾಲ್ ಮೆಂಡೀಸ್ 34 ರನ್ ಮತ್ತು ಸದೀರ ಸಮರವಿಕ್ರಮ 17 ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ವೆಸ್ಟ್ ಇಂಡೀಸ್ ತಂಡದ ಪರ ಬೌಲಿಂಗ್‌ನಲ್ಲಿ ಕೆವಿನ್ ಸಿಂಕ್ಲೆರ್ ಮತ್ತು ಅಕೇಲ್ ಹೊಸೈನ್ ತಲಾ ಒಂದೊಂದು ವಿಕೆಟ್ ಪಡೆದರು. ಉಳಿದ ಯಾವ ಬೌಲರ್‌ಗಳು ಪ್ರಭಾವ ಬೀರಲು ವಿಫಲರಾದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಪರ ಬ್ರಾಂಡನ್ ಕಿಂಗ್ 10 ರನ್, ಜಾನ್ಸನ್ ಚಾರ್ಲ್ಸ್ 39 ರನ್, ಶಾಮರ್ ಬ್ರೂಕ್ಸ್ 2 ರನ್, ನಾಯಕ ಶಾಯ್ ಹೋಪ್ 2 ರನ್, ನಿಕೋಲಸ್ ಪೂರನ್ 14 ರನ್, ಕೀಸಿ ಕಾರ್ಟಿ 96 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 87 ರನ್ ಗಳಿಸಿದರು.
ಕೈಲ್ ಮೇಯರ್ಸ್ 18 ರನ್, ರೊಮಾರಿಯೋ ಶಫರ್ಡ್ 26 ರನ್, ಕೆವಿನ್ ಸಿಂಕ್ಲೆರ್ 25 ರನ್ ಮತ್ತು ಅಕೇಲ್ ಹೊಸೈನ್ 6 ರನ್ ಗಳಿಸಿದರು.
ಶ್ರೀಲಂಕಾ ತಂಡದ ಪರ ಬೌಲಿಂಗ್‌ನಲ್ಲಿ ಮಹೀಶ್ ತೀಕ್ಷಣ 10 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದುಶನ್ ಹೇಮಂತ್ 2 ವಿಕೆಟ್ ಪಡೆದರು. ಉಳಿದಂತೆ ದಿಲ್ಶನ್ ಮಧುಶಂಕ, ದಸುನ್ ಶನಕ, ಮತೀಶ್ ಪತಿರಣ ಮತ್ತು ಸಹನ್ ಅರಚ್ಚಿಗೆ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವು ಶ್ರೀಲಂಕಾ ತಂಡ ಕ್ವಾಲಿಫೈಯರ್‌ನಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿತು ಮತ್ತು ಭಾನುವಾರ, ಜುಲೈ 9ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನೆಚ್ಚಿನ ತಂಡವಾಗಿ ಪ್ರವೇಶಿಸಿದೆ.
ಮುಂಬರುವ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಪುರುಷರ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications