ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ ನಂಬಲಸಾಧ್ಯವಾದ ಇನ್ನಿಂಗ್ಸ್‌ಗೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. 292 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗಲೂ ಎದೆಗುಂದದ ಮ್ಯಾಕ್ಸ್‌ವೆಲ್ ಅಮೋಘ ಆಟದ ಮೂಲಕ ಆಸಿಸ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 128 ಎಸೆತಗಳನ್ನು ಎದುರಿಸಿ ಬರೊಬ್ಬರಿ 201 ರನ್ ಬಾರಿಸಿದ್ದಲ್ಲದೆ ತಂಡವನ್ನು ಗೆಲ್ಲಿಸಿದ್ದರು. ಈ ಇನ್ನಿಂಗ್ಸ್‌ಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ದಿಗ್ಗಜರೂ ದಂಗಾಗಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಈ ಅಮೋಘ ಆಟಕ್ಕೆ ವಿಶ್ವದ ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗಳು ಹರಿದುಬರುತ್ತಿದೆ. ಕ್ರಕೆಟ್ ಲೋಕದ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಕೂಡ ಆಸಿಸ್ ಆಟಗಾರನ ಈ ಬ್ಯಾಟಿಂಗ್‌ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇಂಥಾ ಆಟವನ್ನು ನಾನು ಎಂದೂ ನೋಡಿಲ್ಲ ಎಂದಿದ್ದಾರೆ ಸಚಿನ್ ತೆಂಡೂಲ್ಕರ್. ಮತ್ತೊಂದೆಡೆ ವೀರೇಂದ್ರ ಸೆಹ್ವಾಗ್ ಕೂಡ ಪ್ರತಿಕ್ರಿಯೆ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದ ಆಟಗಾರ ಜದ್ರಾನ್ ಅವರ ಶತಕವನ್ನು ಕೊಂಡಾಡಿರುವ ಸಚಿನ್ ತೆಂಡೂಲ್ಕರ್ ಅಫ್ಘಾನಿಸ್ತಾನ ಉತ್ತಮ ಮೊತ್ತವನ್ನು ಗಳಿಸಲು ಈ ಆಟಗಾರ ಕಾರಣವಾದರು ಎಂದು ಹೊಗಳಿದ್ದಾರೆ. ಬೌಲಿಂಗ್‌ನಲ್ಲಿಯೂ ದ್ವಿತಿಯಾರ್ಧವನ್ನು ಅಫ್ಘಾನಿಸ್ತಾನ ಅದ್ಭುತವಾಗಿ ಆರಂಭಿಸಿದರೂ ಮ್ಯಾಕ್ಸ್‌ವೆಲ್ ಆಟ ಎಲ್ಲವನ್ನೂ ಬದಲಾಯಿಸಲು ಕಾರಣವಾಯುತು ಎಂದಿದ್ದಾರೆ. ಅಲ್ಲದೆ ನಾನು ಕಂಡ ಅದ್ಭಯತವಾದ ಏಕದಿನ ಬ್ಯಾಟಿಂಗ್ ಪ್ರದರ್ಶನ ಇದು ಎಂದಿದ್ದಾರೆ ಸಚಿನ್ ತೆಂಡೂಲ್ಕರ್.
"ಅಫ್ಘಾನಿಸ್ತಾನ ತಂಡವನ್ನು ಉತ್ತಮ ಸ್ಥಾನದಲ್ಲಿರಿಸಲು ಜದ್ರಾನ್ ಅವರಿಂದ ಬಂದ ಆಟ ಅದ್ಭುತವಾಗಿತ್ತು. ಅವರು ದ್ವಿತಿಯಾರ್ಧವನ್ನು ಕೂಡ ಅದ್ಭುತವಾಗಿ ಆರಂಭಿಸಿದರು. ಒಟ್ಟಾರೆಯಾಗಿ 70 ಓವರ್‌ಗಳಲ್ಲಿ ಅವರು ಅದ್ಭುತ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದರು. ಆದರೆ ಕೊನೆಯ 25 ಓವರ್‌ಗಳ ಆಟ ಅವರ ದೆಸೆಯನ್ನೇ ಬದಲಾಯಿಸಿತು. ಮ್ಯಾಕ್ಸ್ ಆಟಕ್ಕೆ ಇನ್ನಿಲ್ಲದಷ್ಟು ಒತ್ತಡವಿತ್ತು! ನಾನು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಏಕದಿನ ಬ್ಯಾಟಿಂಗ್ ಪ್ರದರ್ಶನ" ಎಂದು ಎಕ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ಮತ್ತೋರ್ವ ದಿಗ್ಗಜ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂಥಾ ಇನ್ನಿಂಗ್ಸ್ ಎಂದು ಕೊಂಡಾಡಿದ್ದಾರೆ. ""ಇದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ರನ್ ಬೆನ್ನಟ್ಟುವಾಗ 200 ರನ್. ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನಗಳಲ್ಲಿ ಮ್ಯಾಕ್ಸ್‌ವೆಲ್ ಅವರ ಈ ಪ್ರದರ್ಶನವೂ ಒಂದು. ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಂದ ಅದ್ಭುತ ಬೆಂಬಲ ಪಡೆದುಕೊಂಡು ಆವಾಹನೆಯಾದವರಂತೆ ಆಡಿದರು ಮ್ಯಾಕ್ಸ್‌ವೆಲ್. ಇದು ಸುದೀರ್ಘ ಕಾಲ ನೆನಪಿಸಿಕೊಳ್ಳುವಂಥಾ ಇನ್ನಿಂಗ್ಸ್" ಎಂದು ಪೋಸ್ಟ್ ಮಾಡಿದ್ದಾರೆ ವೀರೇಂದ್ರ ಸೆಹ್ವಾಗ್.
ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಮ್ ಅಕ್ರಮ್, 'ಇತ್ತೀಚಿನ ವರ್ಷಗಳ ಶ್ರೇಷ್ಠ ಏಕದಿನ ಇನ್ನಿಂಗ್ಸ್ ಎಂದು ಸುಲಭವಾಗಿ ಹೇಳಬಹುದು' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್, ಮೊಹಮ್ಮದ್ ಕೈಫ್, ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್, ಭಾರತದ ಸ್ಪಿನ್ನರ್ ಯುಜಿ ಚಾಹಲ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಈ ಆಟವನ್ನು ಕೊಂಡಾಡಿದ್ದಾರೆ.