ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರು ಅಕ್ಟೋಬರ್ 12ರಂದು ನೇರವಾಗಿ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ.
ಇದೇ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಬಹು ನಿರೀಕ್ಷಿತ ಪಂದ್ಯದ ತಯಾರಿಯಲ್ಲಿ ಶುಭ್ಮನ್ ಗಿಲ್ ತೊಡಗಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಶುಭ್ಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡಿದ್ದಾರೆ ಮತ್ತು ಅವರ ಆಗಮನವು ಅನಿಶ್ಚಿತತೆಯಿಂದ ಕೂಡಿದೆ. ಭಾರತದ ಮೊದಲ ಪಂದ್ಯಕ್ಕೂ ಮುನ್ನ ಗಿಲ್‌ರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲು ಕಾರಣವಾಯಿತು. ಅಫ್ಘಾನಿಸ್ತಾನ ವಿರುದ್ಧದ ಭಾರತದ ಎರಡನೇ ವಿಶ್ವಕಪ್ ಪಂದ್ಯದಿಂದಲೂ ಹೊರಗುಳಿಯಬೇಕಾಯಿತು.

ಶುಭ್ಮನ್ ಗಿಲ್ ಅವರು 2023ರ ಏಕದಿನ ಪಂದ್ಯಗಳಲ್ಲಿ ಪ್ರಭಾವಶಾಲಿ ಪ್ರದರ್ಶನ ಹೊಂದಿದ್ದಾರೆ. ಗಿಲ್ ಈ ವರ್ಷದ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗಿ ಹೊರಹೊಮ್ಮಿದರು. 72.35ರ ಅತ್ಯುತ್ತಮ ಸರಾಸರಿ ಮತ್ತು 105.03ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 1230 ರನ್‌ಗಳನ್ನು ಶುಭ್ಮನ್ ಗಿಲ್ ಬಾರಿಸಿದ್ದಾರೆ.
24 ವರ್ಷದ ಶುಭ್ಮನ್ ಗಿಲ್ ಭಾರತದ ಯಶಸ್ವಿ 2023ರ ಏಷ್ಯಾ ಕಪ್ ಅಭಿಯಾನದ ವೇಳೆ ಒಟ್ಟು 302 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.
ಶುಭ್ಮನ್ ಗಿಲ್ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಮೂಲಗಳು ಈ ಹಿಂದೆ ಸೂಚಿಸಿತ್ತು. ಆದರೆ ಅವರು ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಭಾಗವಾಗುತ್ತಾರೆಯೇ ಎಂಬುದು ಖಚಿತವಾಗಿಲ್ಲ.
"ಶುಭ್ಮನ್ ಗಿಲ್ ಸಂಪೂರ್ಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇಂದು ಚೆನ್ನೈನಿಂದ ಅಹಮದಾಬಾದ್‌ಗೆ ತೆರಳಲು ಸಿದ್ಧರಾಗಿದ್ದಾರೆ. ಗಿಲ್ ಗುರುವಾರ ಮೊಟೆರಾದಲ್ಲಿ ಸಣ್ಣ ಅಭ್ಯಾಸದ ಅವಧಿಯನ್ನು ಹೊಂದುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಚೇತರಿಕೆ ಉತ್ತಮವಾಗಿದೆ ಆದರೆ ಅವರು ಪಾಕಿಸ್ತಾನದ ವಿರುದ್ಧ ಆಡಬಹುದೇ ಎಂದು ನಮಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ," ಎಂದು ಅನಾಮಧೇಯ ಬಿಸಿಸಿಐ ಮೂಲಗಳು ತಿಳಿಸಿವೆ.

ಶುಭ್ಮನ್ ಗಿಲ್ ಈಗಾಗಲೇ ಮೊದಲ ಎರಡು ವಿಶ್ವಕಪ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯ ಮತ್ತು ಅಫ್ಘಾನಿಸ್ತಾನ ವಿರುದ್ಧ ಪಂದ್ಯ. ಭಾರತೀಯ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಬುಧವಾರ ತಡರಾತ್ರಿ ಅಹಮದಾಬಾದ್ ತಲುಪಿದ್ದಾರೆ.
ಶುಭ್ಮನ್ ಗಿಲ್ ಅವರ ಇತ್ತೀಚಿನ ಆರೋಗ್ಯ ಸಮಸ್ಯೆಗಳಿಂದಾಗಿ ಮುಂದಿನ ಪಂದ್ಯದಲ್ಲಿಯೂ ಆಡುವುದು ಅನಿಶ್ಚಿತತೆಯಾಗಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಶುಭ್ಮನ್ ಗಿಲ್ ಶೀಘ್ರದಲ್ಲೇ ಕಣಕ್ಕಿಳಿಯಲಿದ್ದಾರೆ ಎಂದು ಸುಳಿವು ನೀಡಿದ್ದರು.
ಚೆನ್ನೈ ಏಮ್ಸ್ ವೈದ್ಯ ಡಾ. ಅಮರಿಂದರ್ ಸಿಂಗ್ ಅವರು ಶುಭ್ಮನ್ ಗಿಲ್ ಅವರ ಡೆಂಗ್ಯೂ ಚೇತರಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತ ತಂಡದ ಬ್ಯಾಟರ್ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಸೂಚಿಸಿದ್ದಾರೆ. "ಅವರು ಉತ್ತಮ ಪ್ರಮಾಣದ ದ್ರವವನ್ನು ತೆಗೆದುಕೊಳ್ಳಬೇಕು. ಇದು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ," ಎಂದಿದ್ದಾರೆ.
"ಮೈಯಾಲ್ಜಿಯಾಸ್ ಮತ್ತು ಕೀಲು ನೋವಿನ ಬಗ್ಗೆ ಕಾಳಜಿ ವಹಿಸಿದರೆ, ಅವನು ಬೇಗನೆ ಚೇತರಿಸಿಕೊಳ್ಳುತ್ತಾನೆ. ಉತ್ತಮ ಪ್ರಮಾಣದ ಆರೋಗ್ಯಕರ ಆಹಾರ, ಹಣ್ಣುಗಳು ಮತ್ತು ದ್ರವವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ," ಎಂದು ಡಾ. ಅಮರಿಂದರ್ ಸಿಂಗ್ ಹೇಳಿದರು.
ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಭಾರತ ತಂಡದ ಬ್ಯಾಟಿಂಗ್ ತೆರೆದರು. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಡಕ್‌ಗೆ ಔಟಾದರೆ, ಬುಧವಾರ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್ ಗಳಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದರು.