ವಿಶ್ವಕಪ್ 2023ರ ಆರಂಭಕ್ಕೆ ನೂರು ದಿನಗಳು ಬಾಕಿರುವಾಗ ಐಸಿಸಿ ಕಡೆಗೂ ಈ ಬಾರಿಯ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ವಿಶ್ವಕಪ್‌ನ ಪಂದ್ಯಗಳು ಯಾವೆಲ್ಲಾ ತಾಣಗಳಲ್ಲಿ ನಡೆಯಲಿದೆ ಎಂಬ ಕುತೂಹಲಕ್ಕೆ ಉತ್ತರ ದೊರೆತಿದೆ. ಇನ್ನು ಟೀಮ್ ಇಂಡಿಯಾ ಯಾವ ತಂಡಗಳನ್ನು ಯಾವ ಕ್ರೀಡಾಂಗಣದಲ್ಲಿ ಎದುರಿಸಲಿದೆ ಎಂಬುದು ಕೂಡ ಸ್ಪಷ್ಟವಾಗಿದೆ.
ಒಟ್ಟು 10 ತಾಣಗಳಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯಲಿದ್ದು ಹೈದರಾಬಾದ್‌ನಲ್ಲಿ ಮೂರು ಪಂದ್ಯಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ತಾಣಗಳು ಕೂಡ ಐದೈದು ಪಂದ್ಯಗಳಿಗೆ ಆತಿಥ್ಯವಹಿಸಲಿದೆ. ಹೈದರಾಬಾದ್ ಹೊರತುಪಡಿಸಿ ಉಳಿದ 9 ತಾಣಗಳಲ್ಲಿಯೂ ಭಾರತ ಲೀಗ್ ಹಂತದಲ್ಲಿ ತಾಲಾ ಒಂದೊಂದು ಪಂದ್ಯಗಳನ್ನು ಆಡುವಂತೆ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಆತಿಥೇಯ ಭಾರತ ತಂಡ ಈ ಟೂರ್ನಿಯಲ್ಲಿ ತವರಿನ ಪ್ರೇಕ್ಷಕರ ಮಧ್ಯೆ ಆಡುವ ಕಾರಣ ಸಾಕಷ್ಟು ನಿರೀಕ್ಷೆ ಸಹಲವಾಗಿಯೇ ಇದೆ. ಆದರೆ ಈ ಟೂರ್ನಿಯಲ್ಲಿ ಎರಡು ಪ್ರಮುಖ ಪಂದ್ಯಗಳು ಆಯೋಜನೆಯಾಗಿರುವ ಎರಡು ತಾಣಗಳು ಆತಂಕ ಮೂಡಿಸಿರುವುದು ಸುಳ್ಳಲ್ಲ. ಈ ಎರಡು ತಾಣಗಳು ಟೀಮ್ ಇಂಡಿಯಾದ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದರೂ ಅಚ್ಚರಿಯಿಲ್ಲ. ಆ ಎರಡು ತಾಣಗಳು ಯಾವುದು? ಯಾವ ಕಾರಣಕ್ಕಾಗಿ ಆ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ಅಗ್ನಿಪರೀಕ್ಷೆ. ಮುಂದೆ ಓದಿ..
ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ
ಭಾರತ ಈ ವರ್ಷ ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿಯೇ ಏಕದಿನ ಸರಣಿಯನ್ನು ಆಡಿದ್ದು ಅದರಲ್ಲಿ ಒಂದು ಪಂದ್ಯ ಚೆನ್ನೈನಲ್ಲಿ ಆಯೋಜನೆಗೊಂಡಿತ್ತು. ಆ ಪಂದ್ಯದಲ್ಲಿ ಆತಿಥೆಯ ಭಾರತ ತಂಡ ಸಾಕಷ್ಟು ಪರದಾಟವನ್ನು ನಡೆಸಿತ್ತು. ಅದಕ್ಕೆ ಕಾರಣ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ. ಆಸಿಸ್‌ನ ಈ ಸ್ಪಿನ್ನರ್‌ನ ದಾಳಿಗೆ ಭಾರತದ ಕೆಲ ದಾಂಡಿಗರು ರನ್‌ಗಳಿಸಲು ಕಷ್ಟಪಡುತ್ತಾರೆ. ವಿಶ್ವಕಪ್‌ನಂಥಾ ಮಹತ್ವದ ಟೂರ್ನಿಯಲ್ಲಿ ಇದೇ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ತಂಡ ಕೂಡ ಆಷ್ಟನ್ ಅಗರ್ ಅಥವಾ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಣಕ್ಕಿಳಿಸಿ ಭಾರತಕ್ಕೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡುವ ಸಾಧ್ಯತೆಯಿದೆ.
ಅಲ್ಲದೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಪಿನ್ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ನಡೆಸಬಲ್ಲಂಥಾ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್ ಅವತಂಥಾ ಬ್ಯಾಟರ್‌ಗಳು ಕೂಡ ಇದ್ದಾರೆ. ಅಂಶಗಳನ್ನು ಗಮನಿಸಿದರೆ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯ ಭಾರತದ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಇದು ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯವೂ ಆಗಿರುವ ಕಾರಣ ಈ ಸವಾಲುಗಳನ್ನು ಭಾರತ ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಧರ್ಮಶಾಲಾದಲ್ಲಿ ನಡೆಯಲಿದೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯ
ಟೀಮ್ ಇಂಡಿಯಾಗೆ ತುರುಗುಬಾಣವಾಗುವ ಸಾಧ್ಯವಿರುವ ಮತ್ತೊಂದು ತಾಣವೆಂದರೆ ಅದು ಧರ್ಮಶಾಲಾ. ಧರ್ಮಶಾಲಾದ ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದು ನಿಜಕ್ಕೂ ಹೆಮ್ಮೆಯೆ. ಆದರೆ ಈ ತಾಣದಲ್ಲಿ ಭಾರತಕ್ಕೆ ಎದುರಾಳಿಯಾಗಿರುವುದು ನ್ಯೂಜಿಲೆಂಡ್. ಇಲ್ಲಿನ ಪಿಚ್ ವೇಗಿಗಳಿಗ ಅದ್ಭುತವಾದ ನೆರವು ನೀಡಲಿದ್ದು ಸ್ವಿಂಗ್ ಕೂಡ ಆಗಲಿದೆ. ನ್ಯೂಜಿಲೆಂಡ್ ತಂಡ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿರುವ ತಂಡವಾಗಿದ್ದು ಭಾರತಕ್ಕೆ ಇದು ತಿರುಗುಬಾಣವಾಗಬಹುದು.
2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಯೂ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ್ದಾಗ ತಂಡಕ್ಕೆ ಆಘಾತ ನೀಡಿದ್ದು ವೇಗಿ ಟ್ರೆಂಟ್ ಬೋಲ್ಟ್. ಈ ಬಾರಿ ಮತ್ತೆ ಅಂಥಾದ್ದೇ ಪ್ರದರ್ಶನ ನ್ಯೂಜಿಲೆಂಡ್ ತಂಡದಿಂದ ಬಂದರೆ ಅಚ್ಚರಿಯಿಲ್ಲ. ಹೀಗಾಗಿ ಈ ಸವಾಲನ್ನು ಭಾರತ ಹೇಗೆ ಎದುರಿಲಿದೆ ಎಂಬುದು ಕೂಡ ಈಗಿನ ಪ್ರಶ್ನೆ.