ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಕೆಲವು ಬದಲಾವಣೆ ಮಾಡಿದ ವೇಳಾಪಟ್ಟಿ ಪ್ರಕಟವಾಗಲಿದೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಏಕದಿನ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಸೆಮಿಫೈನಲ್‌ಗೆ ಪ್ರವೇಶಿಸುವ "ಅತ್ಯುತ್ತಮ ನಾಲ್ಕು' ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ಮೂರು ಬಾರಿ ವಿಶ್ವಕಪ್ ವಿಜೇತ ಮತ್ತು ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಅತಿ ಹೆಚ್ಚಿನ ವಿಕೆಟ್ ಟೇಕರ್ ಬೌಲರ್ ಆಗಿರುವ ಗ್ಲೆನ್ ಮೆಕ್‌ಗ್ರಾತ್, ಭಾರತದಲ್ಲಿ ಮುಂಬರುವ ಐಸಿಸಿ ಪಂದ್ಯಾವಳಿಯು ರೋಚಕತೆಯಿಂದ ಕೂಡಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಗ್ಲೆನ್ ಮೆಕ್‌ಗ್ರಾತ್ ಅವರು 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆತಿಥೇಯ ಭಾರತವನ್ನು ನಾಲ್ಕು ಅತ್ಯುತ್ತಮ ತಂಡಗಳಾಗಿ ಆಯ್ಕೆ ಮಾಡಿದರು.
"ನಾನು ಆಸ್ಟ್ರೇಲಿಯಾ ತಂಡವನ್ನು ಆ ನಾಲ್ಕು ಅತ್ಯುತ್ತಮ ತಂಡಗಳಲ್ಲಿ ಇರಿಸುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗುವುದಿಲ್ಲ. ನಿಸ್ಸಂಶಯವಾಗಿ, ಭಾರತ ತನ್ನದೇ ಆದ ಪರಿಸ್ಥಿತಿಯಲ್ಲಿ ಆಡುತ್ತಿದೆ. ಇಂಗ್ಲೆಂಡ್ ಕೆಲವು ಶ್ರೇಷ್ಠ ಕ್ರಿಕೆಟ್ ಆಡುತ್ತಿದೆ ಮತ್ತು ಪಾಕಿಸ್ತಾನ ತಂಡವೂ ಉತ್ತಮವಾಗಿ ಆಡುತ್ತಿದೆ. ಹಾಗಾಗಿ, ಈ ನಾಲ್ಕು ತಂಡಗಳು ಅತ್ಯುತ್ತಮವಾಗಿವೆ," ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ತಿಳಿಸಿದರು.
ಕೊನೆಯ ಆವೃತ್ತಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ (2015) ಮತ್ತು ಭಾರತ (2011) ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದರೆ, 2019ರಲ್ಲಿ ಇಂಗ್ಲೆಂಡ್ ತಂಡ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.
ಮತ್ತೊಂದೆಡೆ, ಪಾಕಿಸ್ತಾನ ತಂಡವು 1992ರಲ್ಲಿ ತಮ್ಮ ಮೊದಲ ಮತ್ತು ಏಕೈಕ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇನ್ನು ಆತಿಥೇಯ ತಂಡವಾಗಿ, 2011ರ ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದಿದ್ದ ಭಾರತ ತಂಡವು, ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
2023ರ ಏಕದಿನ ವಿಶ್ವಕಪ್‌ಗೆ ಎರಡು ತಿಂಗಳು ಬಾಕಿ ಇರುವಾಗ, ಭಾರತೀಯ ಕ್ರಿಕೆಟ್ ತಂಡದಲ್ಲಿ ಇನ್ನೂ ಸಂಯೋಜನೆ ಮಾಡಲಾಗುತ್ತಿಲ್ಲ. ಕೆಲವು ಗಾಯಗೊಂಡ ಟಾಪ್ ಆಟಗಾರರ ಲಭ್ಯತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಕಾಡುತ್ತಿವೆ.
2023ರ ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡಲಿದೆ.
ಪಾಕಿಸ್ತಾನ ವಿರುದ್ಧದ ಭಾರತದ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಿಂದ ಅಕ್ಟೋಬರ್ 14ಕ್ಕೆ ಬದಲಾಯಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.