ಏಕದಿನ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಈಗಾಗಲೇ ಟೂರ್ನಿಯ ವೇಳಾವಟ್ಟಿ ಬಹಿರಂಗವಾಗಿದೆ, ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಕಾತುರತೆ ಹಾಗೂ ಕುತೂಹಲ ಹೆಚ್ಚಾಗಿದೆ. ಇನ್ನು ಈ ಪ್ರತಿಷ್ಟಿತ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಕೂಡ ಭರದ ಸಿದ್ಧತೆಯನ್ನು ನಡೆಸುತ್ತಿದ್ದು ನಾಲ್ಕು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಮೆಗಾ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಸರ್ವಪ್ರಯತ್ ನಡೆಸುತ್ತಿದೆ.
ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 19ರ ವರೆಗೆ ನಡೆಯಲಿರುವ ಈ ಮಹಾ ಕದನವನ್ನು ಗೆಲ್ಲುವ ನೆಚ್ಚಿನ ತಂಡಗಳಾಗಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಇಂಗ್ಲೆಂಡ್ ಗುರುತಿಸಿಕೊಂಡಿದ್ದು ನ್ಯೂಜಿಲೆಂಡ್, ಪಾಕಿಸ್ತಾನ ದಕ್ಷಿಣ ಆಫ್ರಿಕಾ ತಂಡಗಳು ಕುಡ ತೀವ್ರ ಪೈಪೋಟಿ ನೀಡುವ ಸಾಧ್ಯತೆಯಿದೆ.

ಇನ್ನು ೨೦೧೯ರ ವಿಶ್ವಕಪ್ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್ ಮಾದರಿಗೆ ಕಾಲಿಟ್ಟು ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಲ ಆಟಗಾರರು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡದ ಪರವಾಗಿ ವಿಶೇಷ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದಾರೆ. ಆ ಐವರು ಕ್ರಿಕೆಟಿಗರು ಯಾರು? ಇಲ್ಲಿದೆ ಮಾಹಿತಿ.
ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಸದ್ಯ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಗುರಿತಿಸಿಕೊಂಡಿದ್ದಾರೆ. 2019ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಸಿರಾಜ್ ಈವರೆಗೆ 24 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರವಾಗಿ ಆಡಿದ್ದು ಇದರಲ್ಲಿ 43 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 4.78ರ ಎಕಾನಮಿ ಹೊಂದಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅದ್ಭುತ ಬೆಳವಣಿಗೆ ಸಾಧಿಸುತ್ತಿರುವ ಸಿರಾಜ್ ಮೇಲೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆಗಳು ಇದೆ.
ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ ಕೂಡ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳು ಇದೆ. ಬ್ಯಾಟಿಂಗ್‌ನಲ್ಲಿ ಯಾವುದೇ ಕಠಿಣ ಬೌಲರ್ ದಾಳಿ ನಡೆಸುತ್ತಿದ್ದರೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಗ್ರೀನ್ ಈಗಾಗಲೇ ಎಲ್ಲಾ ಮಾದರಿಗೂ ಸೂಕ್ತವಾಗುವ ಆಟಗಾರ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್‌ನಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದು ವೇಗ ಹಾಗೂ ನಿಖರ ದಾಳಿಯ ಮೂಲಕ ಎದುರಾಳಿಯನ್ನು ಕಂಗೆಡಿಸುವ ಸಾಮರ್ಥ್ಯಹೊಂದಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಸದ್ಯ ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಮೂರು ವರ್ಷಗಳಲ್ಲಿ ರೌಫ್ ತಮ್ಮ ಶಿಸ್ತಿನ ದಾಳಿಯ ಮೂಲಕ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. 2020ರ ಬಳಿಕ ಏಕದಿನ ಮಾದರಿಯಲ್ಲಿ ಪಾಕ್ ಪರವಾಗಿ ಆಡುತ್ತಿರುವ ರೌಫ್ 22 ಏಕದಿನ ಪಂದ್ಯಗಳನ್ನು ಆಡಿದ್ದು 39 ವಿಕೆಟ್ ಸಂಪಾದಿಸಿದ್ದಾರೆ. 5.85ರ ಎಕಾನಮಿಯಲ್ಲಿ ಅವರು ಬೌಲಿಂಗ್ ನಡೆಸಿದ್ದಾರೆ. ಇನ್ನು ಭಾರತದಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ನಡೆಯುತ್ತಿರುವ ಕಾರಣ ಇಲ್ಲಿನ ವಾತಾವರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಹ್ಯಾರಿಸ್ ರೌಫ್.
ಈ ಬಾರಿಯ ವಿಶ್ವಕಪ್‌ನಲ್ಲಿ ಟ್ರೆವಿಸ್ ಹೆಡ್ ಆರಂಭಿಕನಾಘಿ ಕಣಕ್ಕಿಳಿಯುವ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಲಂಡನ್‌ನ ಓವಲ್‌ನಲ್ಲಿ ನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಆಸಿಸ್ ಅಭಿಮಾನಿಗಳ ಹೃದಯ ಗೆದ್ದಿರುವ ಹೆಡ್ ಏಕದಿನ ವಿಶ್ವಕಪ್‌ನಲ್ಲಿಯೂ ಪ್ರಮುಖ ಪಾತ್ರವಹಿಸುವ ವಿಶ್ವಾಸ ಮೂಡಿಸಿದ್ದಾರೆ. ನಿರ್ಣಾಯಕ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೆಡ್ ಈಗಾಗಲೇ ಪ್ರದರ್ಶಿಸಿದ್ದು ಹಾಗಾಗಿ ಆಸಿಸ್ ಮ್ಯಾನೇಜ್‌ಮೆಂಟ್ ಕೂಡ ಈ ಆಟಗಾರನ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡದೆ.
ಆರೋನ್ ಫಿಂಚ್ ನಿವೃತ್ತಿಯ ಬಳಿಕ ಆ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿಯಲು ಹೆಡ್ ಸೂಕ್ತ ಎಂದು ನಾಯಕ ಪ್ಯಾಟ್ ಕಮ್ಮಿನ್ಸ್ ನಿರ್ಧರಿಸಿದ್ದು ಆ ಜವಾಬ್ಧಾರಿಯಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ. ಅಲ್ಲದೆ ಕಳೆದ ಮಾರ್ಚ್‌ನಲ್ಲಿ ಭಾರತದ ವಿರುದ್ಧ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಹೆಡ್ ಅದ್ಭುತ ಪ್ರದರ್ಶನ ನೀಡಿ ಭಾರತದ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಭಾರತದ ನೆಲದಲ್ಲಿ ವಿಶ್ವಕಪ್‌ನಂಥಾ ವೇದಿಕೆಯಲ್ಲಿ ಮಿಂಚುವ ವಿಶ್ವಾಸ ಮೂಡಿಸಿದ್ದಾರೆ ಟ್ರೆವಿಸ್ ಹೆಡ್.
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ತನ್ನಲದಲಿರುವ ಬ್ಯಾಟಿಂಗ್ ಕೌಶಲ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ವರ್ಷ ಹೈದರಾಬಾದ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಗಿಲ್ ದ್ವಿಶತಕವನ್ನು ಸಿಡಿಸಿ ಎಲ್ಲರ ಹಿಮ್ಮೇರುವಂತೆ ಮಾಡಿದ್ದರು. ಈವರೆಗೆ ಶುಬ್ಮನ್ ಗಿಲ್ 9 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ ಮೂರು ಶತಕ ಹಾಗೂ ಒಂದು ಅರ್ಧ ಶತಕ ಸಹಿತ 624 ರನ್‌ಗಳಿಸಿದ್ದು 117.51ರಷ್ಟು ಅದ್ಭುತ ಸ್ಟ್ರೈಕ್‌ರೇಟ್ ಕೂಡ ಹೊಂದಿದ್ದಾರೆ. ಗಿಲ್ ಅವರ ಈ ಅಂಕಿಅಂಶಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅವರ ಮೇಲೆ ಮತ್ತಷ್ಟು ಹೆಚ್ಚಿನ ನಿರೀಕ್ಷೆ ಮೂಡಿಸುವಂತ ಮಾಡಿದೆ.