2023ರ ಐಸಿಸಿ ಏಕದಿನ ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ, ಪಾಕಿಸ್ತಾನದ ಕ್ರಿಕೆಟ್ ನಿರ್ದೇಶಕ ಮಿಕ್ಕಿ ಆರ್ಥರ್ ಅವರು ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಭಾರತ ತಂಡವನ್ನು ಮತ್ತೆ ಎದುರಿಸಲಿದೆ ಎಂದು ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ 2023ರ ವಿಶ್ವಕಪ್‌ನ ಏಕಪಕ್ಷೀಯ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಪ್ರತಿರೋಧ ನೀಡಲು ಸಾಧ್ಯವಾಗದೆ ಮುಖಭಂಗ ಅನುಭವಿಸಿತು. ಏಕದಿನ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದ್ದು, ಅಜೇಯವಾಗಿ 8ನೇ ಗೆಲುವು ಸಾಧಿಸಿದೆ.

ಪಾಕಿಸ್ತಾನ ತಂಡ ವಿಶ್ವಕಪ್‌ನ ಸೆಮಿಫೈನಲ್ ಅಥವಾ ಫೈನಲ್‌ಗೆ ಪ್ರವೇಶಿಸಬಹುದು ಎಂದು ಮಿಕ್ಕಿ ಆರ್ಥರ್ ಇನ್ನೂ ನಂಬಿರುವಾಗ, ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್‌ಗೆ ಹಾಗೆ ಅನ್ನಿಸಲಿಲ್ಲ.
ಕೇರಳ ಮೂಲದ ವೇಗದ ಬೌಲರ್ ಎಸ್ ಶ್ರೀಶಾಂತ್, ಪ್ರಸ್ತುತ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಗುಣಮಟ್ಟದಲ್ಲಿ ದೊಡ್ಡ ಅಂತರವಿದೆ ಎಂದು ಭಾವಿಸಿದ್ದಾರೆ ಮತ್ತು ಇದೀಗ ಭಾರತದ ಸಿ ತಂಡವು ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸುತ್ತದೆ ಎಂದಿದ್ದಾರೆ.

"ನಾವು ಫೈನಲ್‌ನಲ್ಲಿ ಭೇಟಿಯಾಗುತ್ತೇವೆ ಎಂದು ಮಿಕ್ಕಿ ಆರ್ಥರ್ ಹೇಳಿದ್ದಾರೆ. ಪಾಕಿಸ್ತಾನ ತಂಡ ಭಾರತವನ್ನು ಐಸಿಸಿ ಟ್ರೋಫಿಯಲ್ಲಿ ಅಥವಾ ಅವರು ಹೊಂದಿರುವ ತಂಡವನ್ನು ಪರಿಗಣಿಸಿ ಇನ್ನಾವುದೇ ಟೂರ್ನಿಯಲ್ಲಿ ಸೋಲಿಸಬಹುದು ಎಂದು ನಾನು ಭಾವಿಸುವುದಿಲ್ಲ. ನಮ್ಮ ಐಪಿಎಲ್ ಆಡುವ ಹುಡುಗರ 'ಸಿ' ತಂಡವೂ ಸಹ ಪಾಕಿಸ್ತಾನದ ಮುಖ್ಯ ತಂಡವನ್ನು ಸೋಲಿಸಬಹುದು," ಎಂದು ಎಸ್ ಶ್ರೀಶಾಂತ್ ಸ್ಪೋರ್ಟ್ಸ್ಕೀಡಾಗೆ ತಿಳಿಸಿದ್ದಾರೆ.
ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ ಅವರು ಪಾಕಿಸ್ತಾನ ತಂಡದ ವಿರುದ್ಧ ಟೀಕಿಸುವುದನ್ನು ಮುಂದುವರೆಸಿದ್ದು, ಅವರು ಇಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಆಡುವ ಕನಸು ಕೂಡ ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಅತಿ ದೊಡ್ಡ ಕ್ರೀಡಾಂಗಣವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾದವು.
"ಪಾಕಿಸ್ತಾನವು ಇಷ್ಟು ದೊಡ್ಡ ಕ್ರೀಡಾಂಗಣದಲ್ಲಿ ಆಡುವ ಕನಸು ಕಾಣುವುದಿಲ್ಲ. ನಾವು ನಿಮಗೆ ಅವಕಾಶ ನೀಡಿದ್ದೇವೆ, ಆದರೆ ನೀವು ಹಾಗೆ ಆಡಿದರೆ, ನಿಮಗೆ ಅಂತಹ ಅವಕಾಶಗಳು ಮತ್ತೆ ಸಿಗುವುದಿಲ್ಲ," ಎಂದು ಎಸ್ ಶ್ರೀಶಾಂತ್ ವ್ಯಂಗ್ಯವಾಡಿದರು.
43 ಓವರ್‌ಗಳಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಗಿದ್ದ ಪಾಕಿಸ್ತಾನ ತಂಡವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಸೋಲಿಸಿತು. ಇದು ಸದ್ಯದ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತೀಯ ಆಟಗಾರರಿಂದ ಸಂಪೂರ್ಣ ಪ್ರದರ್ಶನವಾಗಿದೆ.
ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೊದಲು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿತು.
ರೋಹಿತ್ ಶರ್ಮಾ ಪಡೆ ತಮ್ಮ ಮುಂದಿನ ಪಂದ್ಯದಲ್ಲಿ ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ನಂತರ ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಠಿಣ ಪಂದ್ಯವನ್ನು ಎದುರಿಸುತ್ತಾರೆ.
ಮತ್ತೊಂದೆಡೆ, ಪಾಕಿಸ್ತಾನ ತಂಡವು ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ವಿರುದ್ಧದ ಸೋಲನ್ನು ಮರೆಯಲು ನೋಡುತ್ತದೆ. ಬಾಬರ್ ಅಜಮ್ ಪಡೆ 3 ಪಂದ್ಯಗಳಿಂದ 2 ಗೆಲುವು ಸಾಧಿಸಿದೆ.
ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯಾ, ಎರಡು ದಿನಗಳ ಹಿಂದೆ ಶ್ರೀಲಂಕಾ ತಂಡವನ್ನು ಸೋಲಿಸಿದೆ. ಅದೇ ಗೆಲುವಿನ ಆವೇಗವನ್ನು ಮುಂದುವರಿಸಲು ಪಾಕಿಸ್ತಾನವನ್ನು ಸೋಲಿಸಲು ಪ್ರಯತ್ನಿಸುತ್ತಿದೆ. ಇದು ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿರಲಿದೆ.