ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ಕೇವಲ ಎರಡೇ ತಿಂಗಳು ಬಾಕಿ ಉಳಿದಿದ್ದು, ಐಸಿಸಿ ಪ್ರಶಸ್ತಿಗಾಗಿ ವಿಶ್ವ ಕ್ರಿಕೆಟ್‌ನ ಬದ್ಧ ಎದುರಾಳಿಗಳ ಸೆಣಸಾಟವನ್ನು ನೋಡಲು ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.
ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಈಗಾಗಲೇ ಐಸಿಸಿ ಘೋಷಣೆ ಮಾಡಿದ್ದು, ಇದಕ್ಕಾಗಿ ಟಿಕೆಟ್‌ಗಳ ಮಾರಾಟವು ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.

2023ರ ಐಸಿಸಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ರಾಜ್ಯ ಅಸೋಸಿಯೇಷನ್‌ಗಳ ಮುಖ್ಯಸ್ಥರನ್ನು ಭೇಟಿ ಮಾಡಿದ ನಂತರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಜುಲೈ 31ರಂದು ಟಿಕೆಟ್ ಮಾರಾಟದ ಬಗ್ಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ, ಜುಲೈ 27ರಂದು ನಡೆದ ಸಭೆಯಲ್ಲಿ, ಬಿಸಿಸಿಐ ಮತ್ತು ಐಸಿಸಿಗೆ ನಿರ್ದಿಷ್ಟ ಸಂಖ್ಯೆಯ ಟಿಕೆಟ್‌ಗಳು ಬೇಕಾಗುತ್ತವೆ ಎಂದು ರಾಜ್ಯ ಅಸೋಸಿಯೇಷನ್‌ಗಳಿಗೆ ಜಯ್ ಶಾ ತಿಳಿಸಿದರು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಂತರ, ಕ್ರೀಡಾಂಗಣ ಪ್ರವೇಶಿಸಲು ಭೌತಿಕ ಟಿಕೆಟ್ ಅಗತ್ಯವಿದೆ. ಟಿಕೆಟ್‌ಗಳನ್ನು ಸುಗಮವಾಗಿ ಸಂಗ್ರಹಿಸಲು ಬಿಸಿಸಿಐ ವ್ಯವಸ್ಥೆ ಮಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸುದ್ದಿಗಾರರಿಗೆ ತಿಳಿಸಿದರು.
ಜುಲೈ 31ರೊಳಗೆ ರಾಜ್ಯ ಅಸೋಸಿಯೇಷನ್‌ಗಳು ತಮ್ಮ ಟಿಕೆಟ್ ದರವನ್ನು ಅಂತಿಮಗೊಳಿಸಿದ ನಂತರ, ಆಗಸ್ಟ್ 10ರಿಂದ ಟಿಕೆಟ್ ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿ ಮಾಡಿದೆ.

ವೇಳಾಪಟ್ಟಿ ಬದಲಾವಣೆಗಾಗಿ ಮೂವರು ಸದಸ್ಯರು ಐಸಿಸಿಗೆ ಪತ್ರ ಬರೆದ ನಂತರ, ಬಿಸಿಸಿಐ ವಿಶ್ವಕಪ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ನವೀಕರಿಸಲಿದೆ. ಹೊಸ ವೇಳಾಪಟ್ಟಿ ಶನಿವಾರ, ಜುಲೈ 29 ಅಥವಾ ಭಾನುವಾರ, ಜುಲೈ 30ರಂದು ಹೊರಬರುವ ನಿರೀಕ್ಷೆಯಿದೆ.
ಅಹಮದಾಬಾದ್ ಪೊಲೀಸರ ಕೋರಿಕೆಯ ಮೇರೆಗೆ, ಈ ಹಿಂದೆ ಅಕ್ಟೋಬರ್ 15ರಂದು ನಿಗದಿಯಾಗಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 14ರಂದು ಒಂದು ದಿನ ದಿನ ಮುಂಚಿತವಾಗಿ ಆಡಿಸುವ ಸಾಧ್ಯತೆ ಇದೆ.
ಟಿಕೆಟ್‌ಗಳಿಗೆ ಸಂಬಂಧಿಸಿದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಸಮಯದಲ್ಲಿಯೂ ಸಹ ಭೌತಿಕ ಟಿಕೆಟ್ ಅಗತ್ಯವಿತ್ತು. ಐಪಿಎಲ್ 2023ರ ಫೈನಲ್‌ನಲ್ಲಿ ಟಿಕೆಟ್‌ಗಳು ಮಳೆಯಿಂದ ನಾಶವಾದಾಗ, ಪ್ರೇಕ್ಷಕರು ಭಾರಿ ಸಮಸ್ಯೆಗಳನ್ನು ಎದುರಿಸಿದರು. ಏಕೆಂದರೆ ಮೀಸಲು ದಿನದಂದು ಫೈನಲ್ ಆಡಿದ್ದರಿಂದ ಟಿಕೆಟ್ ಜೊತೆಗೆ ಕ್ರೀಡಾಂಗಣಕ್ಕೆ ಪ್ರವೇಶಿಸಬೇಕಾಗಿತ್ತು.
ತೊಂದರೆಯಿಲ್ಲದ ಟಿಕೆಟ್ ಹಂಚಿಕೆಯ ಕುರಿತು ಜಯ್ ಶಾ ಅಭಿಮಾನಿಗಳಿಗೆ ಭರವಸೆ ನೀಡಿದ್ದು, "ಪಂದ್ಯಕ್ಕೆ ಒಂದು ವಾರದ ಮೊದಲು ಭೌತಿಕ ಟಿಕೆಟ್‌ಗಳನ್ನು 7ರಿಂದ 8 ಸ್ಥಳಗಳಲ್ಲಿ ನೀಡಲು ನಾವು ವ್ಯವಸ್ಥೆ ಮಾಡುತ್ತೇವೆ. ನಾವು ಅದನ್ನು ತೊಂದರೆಯಿಲ್ಲದಂತೆ ಮಾಡುತ್ತೇವೆ. ಮೊದಲು ದ್ವಿಪಕ್ಷೀಯ ಪಂದ್ಯಗಳಿಗೆ ಇ-ಟಿಕೆಟ್ (ಆನ್‌ಲೈನ್) ವ್ಯವಸ್ಥೆಯನ್ನು ಪ್ರಾರಂಭಿಸುತ್ತೇವೆ," ಎಂದು ಜಯ್ ಶಾ ಅವರು ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಹೇಳಿದರು.
ಏಕದಿನ ವಿಶ್ವಕಪ್ ನಡೆಯುವ ಸಮಯದಲ್ಲಿ ಎಲ್ಲಾ ಕ್ರೀಡಾಂಗಣಗಳಲ್ಲಿ ಆಹಾರ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಭರವಸೆ ನೀಡಿದೆ.
ಅಲ್ಲದೆ, ಅಭಿಮಾನಿಗಳಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಪಾನೀಯ ಕಂಪನಿಯೊಂದಿಗೆ ಬಿಸಿಸಿಐ ಒಪ್ಪಂದ ಮಾಡಿಕೊಳ್ಳುತ್ತಿದೆ ಮತ್ತು ಆರೋಗ್ಯಕರ ಆಹಾರದ ವಿತರಣೆಯ ಬಗ್ಗೆಯೂ ಕಾಳಜಿ ವಹಿಸಲಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ವೇಳಾಪಟ್ಟಿ ಬದಲಾವಣೆ ವೇಳೆ ದಿನಾಂಕ ಮತ್ತು ಸಮಯವನ್ನು ಮಾತ್ರ ಬದಲಾಯಿಸಲಾಗುವುದು, ಸ್ಥಳಗಳನ್ನು ಬದಲಾಯಿಸುವುದಿಲ್ಲ. ಪಂದ್ಯಗಳ ನಡುವೆ ಆರು ದಿನಗಳ ಅಂತರವಿದ್ದರೆ, ನಾವು ಅದನ್ನು 4-5 ದಿನಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
"ಒಂದು ವಾರದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಐಸಿಸಿಯೊಂದಿಗೆ ಸಮಾಲೋಚಿಸಿ ಬದಲಾವಣೆಗಳನ್ನು ಮಾಡಲಾಗುವುದು," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.