ಮಂಗಳವಾರ, ಜೂನ್ 27ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬೈನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದವು.
ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ಮುಖಾಮುಖಿಯೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಇನ್ನು ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡವು ಪಾಕಿಸ್ತಾನ ವಿರುದ್ಧ ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ. ಪಂದ್ಯಾವಳಿಯ ಬಹು ನಿರೀಕ್ಷಿತ ಹಣಾಹಣಿಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ.
ಗಮನಾರ್ಹ ವಿಷಯವೆಂದರೆ, ಭಾರತ ತಂಡವು 50 ಓವರ್‌ಗಳ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆಯನ್ನು ಹೊಂದಿದೆ. ಏಕೆಂದರೆ, ಈ ಹಿಂದೆ ಮುಖಾಮುಖಿಯಾದ ಎಲ್ಲಾ ಏಳು ಸಂದರ್ಭಗಳಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಸೋಲಿಸಿದೆ.
2023ರ ಹೈ-ವೋಲ್ಟೇಜ್ ಕದನಕ್ಕೆ ಮುನ್ನ ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸಲು, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತವು ದೊಡ್ಡ ಪಂದ್ಯಗಳ ಒತ್ತಡವನ್ನು ಪಾಕಿಸ್ತಾನಕ್ಕಿಂತ ಉತ್ತಮವಾಗಿ ನಿಭಾಯಿಸುತ್ತದೆ. ಹಾಗಾಗಿ ಅಸಾಧಾರಣ ದಾಖಲೆ ಹೊಂದಿದೆ ಎಂದು ಹೇಳಿದ್ದಾರೆ.

"ಭಾರತ ತಂಡವು ಒತ್ತಡವನ್ನು ನಿಭಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಹೀಗಾಗಿಯೇ ಭಾರತ ಗೆಲ್ಲುತ್ತಿದೆ. ಆದರೆ ಪಾಕಿಸ್ತಾನ ತಂಡವು ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಗೆಲ್ಲದ ಭಾರವನ್ನು ಹೊಂದಿದೆ. ಇದು ಅವರನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.
"1990ರ ದಶಕದಲ್ಲಿ ಪಾಕಿಸ್ತಾನವು ಒತ್ತಡವನ್ನು ನಿಭಾಯಿಸುವಲ್ಲಿ ಉತ್ತಮರಾಗಿತ್ತು. ಆದರೆ 2000ರ ನಂತರ ಭಾರತ ತಂಡವು ಅದನ್ನು ಚೆನ್ನಾಗಿ ನಡೆಸುತ್ತದೆ. ಅವರ ಯಾವುದೇ ಆಟಗಾರ ಒತ್ತಡವನ್ನು ಅನುಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅದು ಸರಿ ಎಂದು ನಾನು ಭಾವಿಸುವುದಿಲ್ಲ," ಎಂದರು.
"ನಾವೂ ಅದನ್ನು ಹೇಳುತ್ತೇವೆ, ಆದರೆ ಅಂತಿಮವಾಗಿ ಇದು ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯ ಎಂದು ನಮಗೆ ತಿಳಿದಿದೆ ಮತ್ತು ಎಲ್ಲರ ಭಾವನೆಗಳು ಉತ್ತುಂಗಕ್ಕೇರುತ್ತವೆ," ಎಂದು ವೇಳಾಪಟ್ಟಿ ಬಿಡುಗಡೆಯ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ಶೋಯೆಬ್ ಅಖ್ತರ್ ಜೊತೆ ಕದನಕ್ಕೆ ಸಿದ್ಧವೆಂದ ವೀರೇಂದ್ರ ಸೆಹ್ವಾಗ್
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರೊಂದಿಗೆ ವಿಶ್ವಕಪ್ ಪಂದ್ಯಾವಳಿ, ಅದರಲ್ಲಿಯೂ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಯುದ್ಧಕ್ಕೆ ಇಳಿಯುವುದಾಗಿ ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ತಿಳಿಸಿದರು.
"ಎಲ್ಲರಿಗೂ ತಿಳಿದಿದೆ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿರುತ್ತದೆ. ಆ ಪಂದ್ಯದ ಸಮಯದಲ್ಲಿ ನಾನು ಶೋಯೆಬ್ ಅಖ್ತರ್ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ಮಾಡಲು ಸಿದ್ಧನಿದ್ದೇನೆ," ಎಂದರು.
ಪ್ರಮುಖವಾಗಿ, ಭಾರತ ತಂಡವು 2020ರವರೆಗೆ ಎಲ್ಲಾ ವಿಶ್ವಕಪ್‌ಗಳಲ್ಲಿ (ಟಿ20 ಮತ್ತು ಏಕದಿನ) ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆಯನ್ನು ಹೊಂದಿತ್ತು. ಆದರೆ, 2021ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ತಂಡದೆದುರು ದುಬೈನಲ್ಲಿ ಹತ್ತು ವಿಕೆಟ್‌ಗಳಿಂದ ಭಾರತ ಸೋಲು ಕಂಡು ದಾಖಲೆಯ ಸರಣಿಯನ್ನು ಕೊನೆಗೊಳಿಸಿತು.