ವಿಶ್ವಕಪ್ ಟೂರ್ನಿಗೂ ಮುನ್ನ ಇಂದು ಅಂತಿಮ ಮೂರು ಅಭ್ಯಾಸ ಪಂದ್ಯಗಳು ಆಯೋಜನೆಯಾಗಿತ್ತು. ಈ ಪೈಕಿ ಭಾರತ ಹಾಗೂ ನೆದರ್ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಗೆ ಆಹುತಿಯಾಗಿದೆ. ಆದರೆ ಉಳಿದೆರಡು ಪಂದ್ಯಗಳು ನಡೆದಿದ್ದು ಫಲಿತಾಂಶ ಹೊರಬಿದ್ದಿದೆ.
ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದರೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು.

ಇನ್ನು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಸೆಣೆಸಾಟದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಮಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಹಾಗೂ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಈ ಪಂದ್ಯದಲ್ಲಿ ಅಮೋಘ ಶತಕವನ್ನು ಸಿಡಿಸಿ ಅಬ್ಬರಿಸಿದರು. ಭರ್ಜರಿ 158 ರನ್‌ಗಳನ್ನು ಕಲೆಹಾಕಿದ ಅವರು ಬಳಿಕ ರಿಟೈರ್ಟ್ ಔಟ್ ಆಗಿ ನಿರ್ಗಮಿಸಿದರು. ಆದರೆ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಮಟ್ಟದಲ್ಲಿ ಲಂಕಾ ನಾಯಕನಿಗೆ ಸಾಥ್ ನೀಡಲಿಲ್ಲ. ಹಾಗಿದ್ದರೂ ಶ್ರೀಲಂಕಾ ಈ ಪಂದ್ಯದಲ್ಲಿ 46.4 ಓವರ್‌ಗಳಲ್ಲಿ 294 ರನ್‌ಗಳನ್ನು ಕಲೆ ಹಾಕಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇನ್ನು ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಅಫ್ಘಾನಿಸ್ತಾನ ತಂಡಕ್ಕೆ ಮಳೆ ಅಡ್ಡಯುಂಟು ಮಾಡಿದ ಕಾರಣದಿಂದಾಗಿ 42 ಓವರ್‌ಗಳಲ್ಲಿ 267 ರನ್‌ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. ಆರಂಭಿಕ ಆಟಗಾರ ಇಬ್ರಾಹಿಮ್ ಜದ್ರಾನ್ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿದ್ದರೂ ರಹ್ಮನುಲ್ಲಾ ಗುರ್ಬಾಜ್ ಹಾಗೂ ರಹ್ಮತ್ ಶಾ ಅಮೋಘ ಜೊತೆಯಾಟವನ್ನು ಆಡುವ ಮೂಲಕ ಲಂಕಾಗೆ ಆಘಾತ ನೀಡಿದರು.
ಲಂಕಾದ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಪುಡಿಗಟ್ಟಿದ ಈ ಜೋಡಿ 212 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಹೀಗಾಗಿ ಗುರ್ಬಾಜ್ 119 ರನ್‌ಗಳನ್ನು ಗಳಿಸಿ ರಿಟೈರ್ಡ್ ಔಟ್ ಆದರೆ ರಹ್ಮತ್ ಶಾ 92 ರನ್‌ಗಳಿಸಿ ನಿವೃತ್ತರಾದರು. ಅಂತಿಮವಾಗಿ ನಿಜಾಬುಲ್ಲಾ ಜಡ್ರಾನ್ ಹಾಗೂ ಅಜ್ಮತುಲ್ಲಾ ಒಮರ್ಜಾಜಿ ಅಫ್ಘನ್ ತಂಡದ ಗೆಲುವಿನ ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ಅಬ್ಯಾಸ ಪಂದ್ಯದಲ್ಲಿ 6 ವಕೆಕಟ್‌ಗಳ ಅಂತರದಿಂದ ಅಫ್ಘಾನಿಸ್ತಾನ ಶ್ರೀಲಂಕಾ ತಂಡವನ್ನು ಮಣಿಸಿತು.
ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಝದ್ರಾನ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ಮೊಹಮ್ಮದ್ ನಬಿ, ರಶೀದ್ ಖಾನ್, ಇಕ್ರಮ್ ಅಲಿಖಿಲ್, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ಅಜ್ಮತುಲ್ಲಾ ಒಮರ್ಜಾಯ್, ಅಬ್ದುಲ್ ರಹಮಾನ್, ರಿಯಾಜ್ ಹಸನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಿಮುತ್ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಲಹಿರು ಕುಮಾರ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಣ