World Cup 2023: ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೆ ಮುಂದೇನು?
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಹತ್ತು ತಂಡಗಳು ಭಾಗವಹಿಸುವ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ, ಜೂನ್ 27ರಂದು ಪ್ರಕಟಿಸಿದೆ.
ಭಾರತದಲ್ಲಿಯೇ ನಡೆಯುವ ಐಸಿಸಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದು, ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಇನ್ನು ಆತಿಥೇಯ ಭಾರತ ತಂಡ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಅಕ್ಟೋಬರ್ 15ರಂದು ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವಿನ ಭಿನ್ನಾಭಿಪ್ರಾಯ ಮತ್ತು ಶೀತಲ ಸಮರದ ನಂತರ, ಅಂತಿಮವಾಗಿ ಅಹಮದಾಬಾದ್‌ನಲ್ಲಿ ಪಂದ್ಯವನ್ನು ಆಡಲಾಗುವುದು ಮತ್ತು ಪಾಕಿಸ್ತಾನವು ಪ್ರಯಾಣಿಸಲಿದೆ ಎಂದು ಬಿಸಿಸಿಐ ನಿರ್ಧರಿಸಿತು.
ಇನ್ನುಳಿದ ಒಂಬತ್ತು ತಂಡಗಳಿಗಿಂತ ಭಿನ್ನವಾಗಿ ಪಾಕಿಸ್ತಾನ ತಂಡವು ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಎಂಬ ಐದು ಸ್ಥಳಗಳಲ್ಲಿ ಆಡಲಿದೆ ಎಂಬುದನ್ನು ಮರೆಯುವಂತಿಲ್ಲ.
ಇದೇ ವೇಳೆ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲು ಪಾಕಿಸ್ತಾನ ತಂಡ ಉತ್ಸುಕವಾಗಿಲ್ಲ. ಈ ಎರಡು ಪಂದ್ಯಗಳ ಸ್ಥಳಗಳನ್ನು ವಿನಿಮಯ ಮಾಡಿಕೊಡಬೇಕೆಂದು ಐಸಿಸಿಗೆ ಮನವಿ ಮಾಡಿತ್ತು. ಆದರೆ, ಅಂತಿಮ ವೇಳಾಪಟ್ಟಿಯಲ್ಲಿ ಪಿಸಿಬಿಯ ಮನವಿಯನ್ನು ತಿರಸ್ಕರಿಸಲಾಗಿದೆ.
ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಆಡಲಿದೆಯೇ?
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಆಡುವುದರಿಂದ ಪಾಕಿಸ್ತಾನ ತಂಡವು ಹೊರಗುಳಿಯಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಪಾಕಿಸ್ತಾನ ತಂಡವು ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮಾತ್ರ ಆಡಲು ಬಯಸುತ್ತದೆ ಎಂದು ಅಂದಿನ ಅಧ್ಯಕ್ಷ ನಜಮ್ ಸೇಥಿ ಐಸಿಸಿಗೆ ಪತ್ರ ಬರೆದಿದ್ದರು ಎಂದು ಪಿಸಿಬಿ ಮೂಲವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ನಾಕೌಟ್ ಪಂದ್ಯದ ಹೊರತು ಪಾಕಿಸ್ತಾನ ತಂಡವು ಅಹಮದಾಬಾದ್‌ನಲ್ಲಿ ಆಡಲು ಬಯಸುವುದಿಲ್ಲ. ಆದರೂ, ಈ ಬಾರಿ ಪಾಕಿಸ್ತಾನದ ಬೇಡಿಕೆಗಳು ಈಡೇರಿಲ್ಲ ಎಂಬುದು ಸ್ಪಷ್ಟವಾಗಿದೆ.
"ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಪ್ರಯಾಣಿಸಲು ರಾಷ್ಟ್ರೀಯ ತಂಡವು ಪಾಕಿಸ್ತಾನ ಸರ್ಕಾರದಿಂದ ಅನುಮತಿ ಪಡೆಯಬೇಕು. ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ತಮ್ಮ ಪಂದ್ಯಗಳನ್ನು ನಿಗದಿಪಡಿಸುವಂತೆ ಪಿಸಿಬಿಯು ಐಸಿಸಿಗೆ ವಿನಂತಿಸಿದೆ," ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಭಾರತ ವಿರುದ್ಧ ಆಡಲು ಪಾಕಿಸ್ತಾನ ಬಹಿಷ್ಕರಿಸಿದರೆ ಮುಂದೇನು?
ಐಸಿಸಿ ವೇಳಾಪಟ್ಟಿ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಹಮದಾಬಾದ್‌ನಲ್ಲಿ ಅಕ್ಟೋಬರ್ 15ರಂದು ನಿಗದಿಪಡಿಸಲಾಗಿದೆ. ವೇಳಾಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಇನ್ನೂ ಸಮಸ್ಯೆಗಳಿವೆಯೇ ಎಂಬುದು ತಿಳಿದಿಲ್ಲ. ಆದರೆ ಪಿಸಿಬಿ ಅಹಮದಾಬಾದ್‌ನಲ್ಲಿ ಆ ಪಂದ್ಯವನ್ನು ಆಡದಿರಲು ನಿರ್ಧರಿಸಿದರೆ, ಭಾರತವು ಅದನ್ನು ಲೆಕ್ಕಿಸುವುದಿಲ್ಲ ಎನ್ನುವುದಂತೂ ಸ್ಪಷ್ಟ.
1996ರಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶ್ರೀಲಂಕಾದಲ್ಲಿ ಯಾವುದೇ ಪಂದ್ಯವನ್ನು ಆಡದಿರಲು ನಿರ್ಧರಿಸಿದ್ದವು. ಆ ಆವೃತ್ತಿಯನ್ನು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಸಹ-ಆತಿಥ್ಯ ವಹಿಸಿದ್ದವು.
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಬಹಿಷ್ಕಾರದ ಪರಿಣಾಮವಾಗಿ, ಅವರು ತಮ್ಮ ಎದುರಾಳಿಗಳಿಗೆ ವಾಕ್-ಓವರ್ ನೀಡಿದರು. ಅದೇ ರೀತಿ, ಭಾರತ ತಂಡವೂ ವಾಕ್-ಓವರ್ ಪಡೆಯುತ್ತದೆ. ಅಂದರೆ ಪಂದ್ಯವನ್ನು ಆಡದೆಯೇ ಪೂರ್ಣ ಅಂಕಗಳನ್ನು ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications