ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಈ ಬಾರಿಯ ವಿರ್ಶವಕಪ್ ಟೂರ್ನಿಯ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿ ಯಾರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಟೀಮ್ ಇಂಡಿಯಾದ ಓರ್ವ ಆಟಗಾರನನ್ನು ಉಲ್ಲೇಖಿಸಿರುವ ಯುವರಾಜ್ ಸಿಂಗ್ ಈತ ಉಳಿದೆಲ್ಲಾ ಆಟಗಾರರಿಗಿಂತಲೂ ಈ ಪ್ರಶಸ್ತಿಗೆ ಹೆಚ್ಚು ಅರ್ಹ ಎಂದಿದ್ದಾರೆ.
ಅಂದಹಾಗೆ ಯುವರಾಜ್ ಸಿಂಗ್ ಹೇಗೆ ಹೇಳಿದ್ದು ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ವಿಚಾರವಾಗಿ. ಭಾರತದ ಪರವಾಗಿ ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಶಮಿ ಅವರಿಗೆ ಈ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಬೇಕು ಎಂದಿದ್ದಾರೆ ಯುವಿ.

ಮೊಹಮ್ಮದ್ ಶಮಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಕೇವಲ 6 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದಾರೆ. ಆದರೆ ಅವರು 23 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಆಟಗಾರ ಎನಿಸಿಕೊಂಡಿದ್ದಾರೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಏಳು ವಿಕೆಟ್ ಕಬಳಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇದು ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿಯೇ ಭಾರತದ ಪರವಾಗಿ ಬೌಲರ್ ಓರ್ವ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ.
"ಭಾರತದ ಬೆಂಚ್‌ನಲ್ಲಿ ಯಾವಾಗಲೂ ಮ್ಯಾಚ್ ವಿನ್ನರ್‌ಗಳು ಇರುತ್ತಾರೆ. ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೆ ತುತ್ತಾಗಿದ್ದು ಒಳ್ಳೆಯದಾಯಿತು ಎದು ನಾನು ಹೇಳಲಾರೆ. ಆದರೆ ಎಲ್ಲರೂ ಕೂಡ ಶಮಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂದು ಕಾಯುತ್ತಿದ್ದರು. ಆದರೆ ಬೆಂಕಿಯಂಥಾ ಪ್ರದರ್ಶನಕ್ಕೆ ಅವರು ವೇದಿಕೆಯನ್ನು ಸಿದ್ದಪಡಿಸಿದ ರೀತಿ ನಿಜಕ್ಕೂ ಅಮೋಘ. ನನ್ನ ಪ್ರಕಾರ ಈ ಬಾರಿಯ ಟೂರ್ನಿಯಲ್ಲಿ ಪ್ಲೇಯರ್ ಆಪ್ ದಿ ಟೂರ್ನಮೆಂಟ್‌ಗೆ ಯಾರಾದರೂ ಅರ್ಹ ಎಂದಿದ್ದರೆ ಅದು ಮೊಹಮ್ಮದ್ ಶಮಿ" ಎಂದಿದ್ದಾರೆ ಯುವರಾಜ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಪ್ರಯತ್ನಗಳಿಗೂ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ. "ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ತಮ್ಮ ಚೊಚ್ಚಲ ವಿಶ್ವಕಪ್ ಪದಕವನ್ನು ಪಡೆಯುವ ಸನಿಹದಲ್ಲಿದ್ದಾರೆ. ಅವರು ಅದಕ್ಕೆ ಬಹಳ ಅರ್ಹರು. ಏಷ್ಯಾಕಪ್‌ಗೂ ಮುನ್ನ ಭಾರತದ ಏಕದಿನ ತಂಡ ಎಲ್ಲಿ ಎಂದು ನಾವು ಹುಡುಕುತ್ತಿದ್ದೆವು. ಯಾಕೆಂದರೆ ನಮಗೆ ಕಾಂಬಿನೇಶನ್ ಗೊತ್ತೇ ಇರಲಿಲ್ಲ. ಅದೇನೇ ಇದ್ದರೂ ತಂಡಕ್ಕೆ ಐಯ್ಯರ್, ರಾಹುಲ್ ಮತ್ತು ಬೂಮ್ರಾ ಮರಳಿದ್ದು ದೊಡ್ಡ ವ್ಯತ್ಯಾಸವನ್ನುಂಟು ಮಾಡಿದೆ" ಎಂದಿದ್ದಾರೆ ಯುವರಾಜ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಹಿಂದಿನ ಆಸ್ಟ್ರೇಲಿಯಾ ತಂಡಕ್ಕೆ ಈಗಿನ ಭಾರತ ತಂಡವನ್ನು ಹೋಲಿಸಿದ್ದಾರೆ ಯುವಿ. "ಭಾರತ ತಂಡದಲ್ಲೀಗ ಐವರು ಪರಿಪೂರ್ಣ ಬ್ಯಾಟರ್‌ಗಳು ಹಾಗೂ ಐವರು ಪರಿಪೂರ್ಣ ಬೌಲರ್‌ಗಳು ಇದ್ದಾರೆ. ನಮ್ಮ ತಂಡದಲ್ಲಿ 8-10 ಮ್ಯಾಚ್ ವಿನ್ನರ್‌ಗಳಿದ್ದಾರೆ. ಈ ಹಿಂದೆ ಪಾರಮ್ಯ ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡ ಮಾತ್ರವೇ ಹೀಗಿತ್ತು" ಎಂದಿದ್ದಾರೆ ಯುವರಾಜ್ ಸಿಂಗ್.