ಈ ಬಾರಿಯ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳೆಲ್ಲಾ ಅಂತ್ಯವಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಆಡಿದ 10 ತಂಡಗಳ ಪೈಕಿ ಈಗ ನಾಲ್ಕು ತಂಡಗಳು ಮಾತ್ರವೇ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಉಳಿದ ಆರು ತಂಡಗಳು ಲೀಗ್ ಹಂತದಿಂದ ನಿರ್ಗಮಿಸಿದೆ. ಈ ವಿಶ್ವಕಪ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಇಂಗ್ಲೆಂಡ್, ಪಾಕಿಸ್ತಾನದಂಥಾ ತಂಡಗಳು ಕೂಡ ಲೀಗ್ ಹಂತಕ್ಕೇ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದೆ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳ ಪೈಕಿ ನಾಲ್ಕು ಗೆಲುವು ಸಾಧಿಸಿದೆ. ಈ ಮೂಲಕ ಕೇವಲ 8 ಅಂಕಗಳನ್ನು ಮಾತ್ರವೇ ಖಾತೆಯಲ್ಲಿ ಪಡೆದುಕೊಂಡು ಐದನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.

ಇದೀಗ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಭಾರತದಲ್ಲಿ ವಿಶ್ವಕಪ್ ಟೂರ್ನಿಯನ್ನು ಅಂತ್ಯಗೊಳಿಸಿ ಪಾಕಿಸ್ತಾನಕ್ಕೆ ವಾಪಸಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ತವರಿನಲ್ಲಿ ಅತ್ಯಂತ ನೀರಸವಾದ ಸ್ವಾಗತ ದೊರೆತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ತಂಡದ ಪ್ರದರ್ಶನದಿಂದಾಗಿ ಎಷ್ಟು ಬೇಸರಗೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ ಬಳಿಕ ಸತತ ನಾಲ್ಕು ಸೋಲು ಅನುಭವಿಸಿತ್ತು. ಭಾರತದ ವಿರುದ್ಧ ಹೀನಾಯ ಸೋಲಿನೊಂದಿಗೆ ಆರಂಭವಾದ ಈ ಸೋಲಿನ ಸರಪಳಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳ ವರೆಗೂ ಮುಂದುವರಿಯಿತು. ನಂತರ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು.