
ಬೆಂಗಳೂರು, ಮೇ 10: ಆಸ್ಟ್ರೇಲಿಯಾ ಕ್ರಿಕೆಟ್ ತಂಡ 2007 ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆದ್ದ ಅಮೋಘ ಸಾಧನೆ ಮಾಡಿತು.
ಅಂದಹಾಗೆ 2007ರ ವಿಶ್ವಕಪ್ ಗೆಲುವಿನಲ್ಲಿ ಆಸೀಸ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಡಮ್ ಗಿಲ್‌ಕ್ರಿಸ್ಟ್ ಪಾತ್ರ ಮಹತ್ವದ್ದು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದರು. ದಾಖಲೆಗಳನ್ನು ಪುಡಿಗಟ್ಟುವ ಆಲೋಚನೆಯಲ್ಲಿ ಕಣಕ್ಕಿಳಿದಿದ್ದ ಗಿಲ್‌ಕ್ರಿಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ್ದರು. ಕೇವಲ 72 ಎಸೆತಗಳಲ್ಲಿ ಶತಕ ಬಾರಿಸಿದ ಗಿಲ್ ಕ್ರಿಸ್ಟ್, 104 ಎಸೆತಗಳಲ್ಲಿ 149 ರನ್‌ಗಳನ್ನು ಸಿಡಿಸಿದರು. ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾಗಿರುವ ವೈಯಕ್ತಿಕ ಗರಿಷ್ಠ ಮೊತ್ತ ಕೂಡ.
ವಿಶೇಷವೆಂದರೆ ಗಿಲ್‌ಕ್ರಿಸ್ಟ್ ಈ ಶತಕ ಬಾರಿಸಲು ತಮ್ಮ ಬ್ಯಾಟಿಂಗ್ ಗ್ಲೌ ಒಳಗೆ ಸ್ಕ್ವಾಷ್ ಚೆಂಡನ್ನು ಇರಿಸಿದ್ದರು. ಬ್ಯಾಟ್‌ನ ಹ್ಯಾಂಡಲ್‌ನ ಗ್ರಿಪ್ ಬಿಗಿಪಡಿಸಲು ಗಿಲ್‌ಕ್ರಿಸ್ಟ್ ಇಂಥದ್ದೊಂದು ಐಡಿಯಾ ಮಾಡಿದ್ದರು. ಗಿಲ್‌ಕ್ರಿಸ್ಟ್ ಅವರ ಬ್ಯಾಟಿಂಗ್ ವೈಭವದ ಫಲವಾಗಿ ಆಸ್ಟ್ರೇಲಿಯಾ ತಂಡ 38 ಓವರ್‌ಗಳಲ್ಲಿ 4 ವಿಕೆಟ್‌ಗೆ 281 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು.
ಬಳಿಕ ಮಳೆ ಸುರಿದರಿಂದ ಶ್ರೀಲಂಕಾ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದನ್ವಯ 36 ಓವರ್‌ಗಳಲ್ಲಿ 268 ರನ್‌ಗಳ ಗುರಿ ನಿಗದಿ ಪಡಿಸಲಾಯಿತು. ಗುರಿ ಬೆನ್ನತ್ತಿದ ಲಂಕಾ ತಂಡ ಸನತ್ ಜಯಸೂರ್ಯ (63) ಮತ್ತು ಕುಮಾರ ಸಂಗಕ್ಕಾರ (54) ಅವರ 116 ರನ್‌ಗಳ ಜೊತೆಯಾಟದ ಮೂಲಕ ಗುರಿಯತ್ತ ಮುನ್ನಡೆಯಿತಾದರೂ ಅಂತಿಮವಾಗಿ 215 ರನ್‌ಗಳಿಗೆ ಸುಸ್ತಾಯಿತು.
ಶತಕ ವೀರ ಗಿಲ್‌ಕ್ರಿಸ್ಟ್‌ಗೆ ಪಂದ್ಯ ಶ್ರೇಷ್ಠ ಗೌರವ ನೀಡಲಾಯಿತು. 13 ಫೋರ್ ಮತ್ತು 8 ಭರ್ಜರಿಯ ಸಿಕ್ಸರ್ ಸಿಡಿಸಿದ್ದ ಗಿಲ್‌ಕ್ರಿಸ್ಟ್ ಶತಕ ಸಂಭ್ರಮದ ವೇಳೆ ತಮ್ಮ ಗ್ಲೌ ತೋರಿಸಿ ಅದರೊಳಗಿನ ಸ್ಕ್ವಾಷ್ ಚೆಂಡನ್ನು ಸೂಚಿಸಿದ್ದರು. ಆ ಕ್ಷಣಕ್ಕೆ ಇದರ ಗುಟ್ಟು ಯಾರಿಗೂ ತಿಳಿದಿರಲಿಲ್ಲ. ಬಳಿಕ ಈ ಕುರಿತಾಗಿ ಮಾತನಾಡಿದ ಆಡಮ್, "ಬ್ಯಾಟಿಂಗ್ ಕೋಚ್‌ನ ಸಲಹೆ ಮೇರೆಗೆ ಈ ಸಾಧನವನ್ನು ನನ್ನ ಗ್ಲೌ ಒಳಗೆ ಅಳವಡಿಸಿದ್ದೆ. ಹೆಚ್ಚು ಗ್ರಿಪ್ ಪಡೆಯಲು ಸ್ಕ್ವಾಷ್ ಬಾಲ್ ಬಳಸುವಂತೆ ಕೋಚ್ ಈ ಸಲಹೆ ನೀಡಿದ್ದರು,'' ಎಂದು ತಮ್ಮ ಸ್ಫೋಟಕ ಬ್ಯಾಟಿಂಗ್‌ನ ಗುಟ್ಟನ್ನು ಬಿಚ್ಚಿಟ್ಟಿದ್ದರು.
1999ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದನ್ನು ಬಿಟ್ಟರೆ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವಿಶ್ವಕಪ್ ಗೆಲ್ಲುವ ವರೆಗೂ ವಿಶ್ವಕಪ್ ಅಖಾಡದಲ್ಲಿ ಒಂದು ಪಂದ್ಯವನ್ನೂ ಸೋತಿರಲಿಲ್ಲ.