ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಮುಮದಿನ ಎರಡು ಪಂದ್ಯಗಳಿಗೂ ಅಲಭ್ಯವಾಗುವುದು ಈಗ ಖಚಿತವಾಗಿದೆ. ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಹಾಗೂ ಅದಾದ ಬಳಿಕದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅಲಭ್ಯವಾಗಲಿದ್ದಾರೆ. ಹೀಗಾಗಿ ಕಳೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಂಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿತ್ತು. ಅದೇ ತಂಡದೊಂದಿಗೆ ಮುಂದಿನ ಎರಡು ಪಂದ್ಯಗಳಿಗೂ ಕಣಕ್ಕಿಳಿಯುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ ಅಲಭ್ಯತೆಯ ಹಿನ್ನೆಲೆಯಲ್ಲಿ ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್ ಹೊರಗುಳಿದಿದ್ದು ಮೊಹಮ್ಮದ್ ಶಮಿ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಭಾರತ ಐವರು ಪೂರ್ಣಪ್ರಮಾಣದ ಬೌಲರ್‌ಗಳೊಂದಿಗೆ ಕಣಕ್ಕಿಳಿದಂತಾಗಿದೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಓರ್ವ ಆಟಗಾರ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೀಗೆ ಭರವಸೆ ವ್ಯಕ್ತಪಡಿಸಿದ ಆ ಆಟಗಾರ ಬೇರೆ ಯಾರೂ ಅಲ್ಲ, ಸೂರ್ಯಕುಮಾರ್ ಯಾದವ್. ಹಾರ್ದಿಕ್ ಪಾಂಡ್ಯ ಬದಲಿಗೆ ಆಡುವ ಬಳಗದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮಹತ್ವದ ಪಾತ್ರ ನಿರ್ಬಹಿಸಲಿದ್ದಾರೆ ಎಂದಿದ್ದಾರೆ. ಇನ್ನು ಕಳೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರನೌಟ್ ಆಗಿದ್ದ ಸೂರ್ಯಕುಮಾರ್ ಯಾದವ್‌ಗೆ ಆ ಪಂದ್ಯದಲ್ಲಿ ಅದೃಷ್ಟವಿರಲಿಲ್ಲ ಎಂದಿದ್ದಾರೆ.
"ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಅಲಭ್ಯವಾಗಿರುವುದು ದುರದೃಷ್ಟಕರ. ಅವರ ಅಲಭ್ಯತೆಯಲ್ಲಿ ಸೂರ್ಯಕುಮಾರ್ ಯಾದವ್ ಬಹಳ ಮಹತ್ವ ದ ಪಾತ್ರವಹಿಸಲಿದ್ದಾರೆ. ಬಹಳ ಮಹತ್ವದ 6ನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ನಡೆಸಲಿದ್ದಾರೆ. ಕಳೆದ ಪಂದ್ಯದಲ್ಲಿ ಅವರಿಗೆ ಅದೃಷ್ಟವಿರಲಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.
"ಸೂರ್ಯಕುಮಾರ್ ಯಾದವ್ ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಪಂದ್ಯ ಕೈತಪ್ಪಲಾರದು. ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುವಷ್ಟು ಕಾಲ ಭಾರತ ಆತಂಕ ಪಡುವ ಅಗತ್ಯವಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಈ ತಂಡದ ಅತ್ಯಂತ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಅವರಿಗೆ ಮುಂದಿನ ಪಂದ್ಯಗಳಲಲಿ ಅವಕಾಶ ದೊರೆತರೆ ಕಳೆದ ಪಂದ್ಯದಲ್ಲಿ ಆದ ರನೌಟ್‌ಅನ್ನು ಸರಿದೂಗಿಸಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ನೀಡಿದ ಪ್ರದರ್ಶನ ನೋಡಲು ಸುಂದರವಾಗಿತ್ತು" ಎಂದಿದ್ದಾರೆ ಹರ್ಭಜನ್ ಸಿಂಗ್.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಮೊನಕಾಲಿನ ಗಾಯಕ್ಕೆ ತುತ್ತಾದ ಪಾಂಡ್ಯ ಪಂದ್ಯದಲ್ಲಿ ಮುಂದುವರಿಯದೆ ಮೈದಾನ ತೊರೆದಿದ್ದರು. ಮೈದಾನದಿಂದ ಹೊರಬೀಳುವ ಮುನ್ನ ಅವರು ಮೂರು ಎಸೆತಗಳನ್ನು ಎಸೆದಿದ್ದರು. ಅದಾದ ಬಳಿಕ ಸಂಪೂರ್ಣವಾಗಿ ಆ ಪಂದ್ಯಕ್ಕೆ ಅಲಭ್ಯವಾಗಿದ್ದ ಪಾಂಡ್ಯ ಕಿವೀಸ್ ಪಂದ್ಯದಿಂದಲೂ ಹೊರಬಿದ್ದಿದ್ದರು.