ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಟೂರ್ನಿಯ ಸೆಣೆಸಾಟಕ್ಕೆ ಇಡೀ ವಿಶ್ವ ಕಾಯುತ್ತಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಸೆಣೆಸಾಟದಲ್ಲಿ ಯಾರಿಗೆ ಮೇಲುಗೈ ದೊರೆಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದ್ದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿರ್ಥಯವಹಿಸಲು ಸರ್ವ ಸನ್ನಧವಾಗಿದೆ.
ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳನ್ನು ಮಣಿಸಿದ್ದರೆ ಪಾಕಿಸ್ತಾನ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಈ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ.

ಇನ್ನು ಪಾಕಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಈವರೆಗೆ ಒಂದೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 7 ಬಾರಿ ಮುಖಾಮುಖಿಯಾದಾಗಲೂ ಭಾರತವೇ ಗೆದ್ದುಕೊಂಡಿದೆ. ಹೀಗಾಗಿ ಈ ಬಾರಿಯ ಮುಖಾಮುಖಿಯಲ್ಲಿ ಆ ದಾಖಲೆಯನ್ನು ಕೊನೆಗೊಳಿಸುವ ಲೆಕ್ಕಾಚಾರದೊಂದಿಗೆ ಪಾಕ್ ಕಣಕ್ಕಿಳಿಯುವುದು ಖಂಡಿತಾ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧದ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನ 1:30ಕ್ಕೆ ಟಾಸ್ ನಡೆಯಲಿದೆ. ಇನ್ನು ಟಾಸ್ ಗೂ ಒಂದು ಗಂಟೆಗಳ ಕಾಲ ಮುನ್ನ ಸಂಗೀತ ಕಾರ್ಯಕ್ರಮವಿರಲಿದ್ದು ಅರಿಜಿತ್ ಸಿಂಗ್ ಸೇರಿದಂತೆ ಕೆಲ ಸ್ಟಾರ್ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಇರಲಿದೆ. ಇನ್ನು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಈ ಬಾರಿಯ ವಿರ್ಶವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ಆಯೋಜನೆಯಾಗಿದ್ದ ಕ್ರೀಡಾಂಣದಲ್ಲಿಯೇ ಈ ಪಂದ್ಯ ಕೂಡ ಆಯೋಜನೆಯಾಗಲಿದೆ. ಆ ಪಂದ್ಯದಲ್ಲಿ ಎರಡು ತಂಡಗಳು ಒಟ್ಟು 565 ರನ್‌ಗಳನ್ನು ಕೇವಲ 10 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದವು. ಇಂಗ್ಲೆಂಡ್ ನೀಡಿದ್ದ ಬೃಹತ್ ಗುರಿಯನ್ನು ಒಂದು ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ತಂಡ ಬೆನ್ನಟ್ಟಿತ್ತು. ಇಂದಿನ ಪಂದ್ಯವನ್ನು ಕಪ್ಪು ಮಣ್ಣಿನ ಪಿಚ್‌ನಲ್ಲಿ ಆಡಸುವ ನಿರೀಕ್ಷೆಯಿದ್ದು ಬ್ಯಾಟರ್‌ಗಳಿಗೆ ಉತ್ತಮವಾಗಿ ನೆರವು ದೊರೆಯುವ ಜೊತೆಗೆ ಎರಡು ತಂಡಗಳ ವೇಗಿಗಳಿಗೆ ಮಿಂಚು ಅವಕಾಶವಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶುಬ್ಮನ್ ಗಿಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್, ಇಫ್ತಿಕಾರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಘಾ ಸಲ್ಮಾನ್, ಫಖರ್ ಜಮಾನ್, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್