ವಿಶ್ವಕಪ್ ಟೂರ್ನಿಯ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಮಾಡಿದ್ದು ಅದ್ಭುತ ಆರಂಭವನ್ನು ಪಡೆದುಕೊಂಡಿತು. ಹೀಗಾಗಿ ಈ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಭಾರೀ ಹಿನ್ನಡೆ ಅನುಭವಿಸುವ ಲಕ್ಷಣಗಳು ಗೋಚರಿಸಿತ್ತು. ಆದರೆ ಮೊದಲ ವಿಕೆಟ್ ಬೇರ್ಪಟ್ಟ ಬಳಿಕ ಆಸ್ಟ್ರೇಲಿಯಾ ಭರ್ಜರಿ ಮೇಲುಗೈ ಸಾಧಿಸಿದ್ದು ಲಂಕಾ ಪಡೆಯನ್ನು 209 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಶ್ರೀಲಂಕಾದ ಆರಂಭಿಕ ಜೋಡಿಯಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಪೆರೆರ ಭರ್ಜರಿ 125 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆಸ್ಟ್ರೇಲಿಯಾದ ಪ್ರಮುಖ ವೇಗಿಗಳ ದಾಳಿಯನ್ನು ಈ ಜೋಡಿ ಸಮರ್ಥವಾಗಿ ದಂಡಿಸುತ್ತಾ ಮುನ್ನುಗ್ಗಿತ್ತು. ಇಬ್ಬರು ಆಟಗಾರರು ಕೂಡ ಅರ್ಧ ಶತಕ ಸಿಡಿಸಿ ಮುನ್ನುಗ್ಗಿದ್ದರು. 22ನೇ ಓವರ್‌ನಲ್ಲಿ ಫಾತುಮ್ ನಿಸಾಂಕ 61 ರನ್‌ಗಳಿಸಿದ್ದಾಗ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಆಸಿಸ್ ಬೌಲರ್‌ಗಳು ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

78 ರಮ್‌ಗಳಿಸಿದ್ದಾಗ ಕುಸಾಲ್ ಪೆರೆರ ಅವರನ್ನು ಕೂಡ ಪ್ಯಾಟ್ ಕಮ್ಮಿನ್ಸ್ ಬೌಲ್ಡ್ ಮಾಡುವ ಮೂಲಕ ವಿಕೆಟ್ ಪಡೆದುಕೊಂಡಾಗ ಲಂಕಾ ಸ್ಥಿತಿ 157 ರನ್‌ಗಳಿಗೆ 2 ವಿಕೆಟ್‌ಗಳಾಗಿತ್ತು. ಆದರೆ ಈ ಜೋಡಿ ವಿಕೆಟ್ ಕಳೆದುಕೊಂಡ ಬಳಿಕ ಲಂಕಾದ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲೇ ಇಲ್ಲ. ಆರಂಭಿಕರನ್ನು ಹೊರತುಪಡಿಸಿದರೆ ಚರಿತ್ ಅಸಲಂಕಾ 25 ರನ್‌ಗಳಿಸಿದ್ದು ಮಾತ್ರವೇ ಎರಡಂಕಿ ತಲುಪಿದ ಮತ್ತೋರ್ವ ಆಟಗಾರ ಎನಿಸಿಕೊಂಡರು. ಉಳಿದೆಲ್ಲಾ ಬ್ಯಾಟರ್‌ಗಳು ಕೂಡ ಒಂದಂಕಿಗೆ ನಿರ್ಗಮಿಸುವ ಮೂಲಕ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ಕಾರಣವಾದರು.
ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ ಎರಡು ವಿಕೆಟ್ ಕಬಳಿಸಿದ್ದರೆ ಆಡಂ ಜಂಪಾ 4 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಒಂದು ವಿಕೆಟ್ ಗ್ಲೆನ್ ಮ್ಯಾಕ್ಸ್‌ವೆಲ್ ಪಾಲಾಗಿದೆ. ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು ಈ ಅಲ್ಪ ಮೊತ್ತವನ್ನು ಆಸಿಸ್ ಪಡೆ ಹೇಗೆ ಬೆನ್ನಟ್ಟಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಸೀನ್ ಅಬಾಟ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಚಾಮಿಕ ಕರುಣಾರತ್ನ, ದುನಿತ್ ವೆಲ್ಲಲಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶಾನ್ ಮಧುಶಂಕ
ಬೆಂಚ್: ದುಶನ್ ಹೇಮಂತ, ಮಥೀಶ ಪತಿರಣ, ಕಸುನ್ ರಜಿತ, ದಿಮುತ್ ಕರುಣಾರತ್ನೆ