ಮುಂಬೈ, ಡಿ. 11: ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವೀಪಕ್ಷೀಯ ಸಮರಕ್ಕೆ ಮುಹೂರ್ತ ಇನ್ನೂ ಫಿಕ್ಸ್ ಆಗಿಲ್ಲವಲ್ಲ ಎಂದು ಕೊರಗುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ.
ವಿಶ್ವ ಟಿ20 ವೇಳಾಪಟ್ಟಿಯಂತೆ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿದ್ದು, ಧರ್ಮಶಾಲದಲ್ಲಿ ಮುಖಾಮುಖಿಯಾಗಲಿವೆ. [ದೈತ್ಯ ಭಾರತವೇ ವಿಶ್ವ ಟಿ20 ಗೆಲ್ಲಲಿದೆ: ಲಾರಾ]
ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿ 2016ರಲ್ಲಿ ನಡೆಯಲಿದ್ದು, ಮಾರ್ಚ್ 19ರಂದು ಧರ್ಮಶಾಲದಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ. ವಿಶ್ವಟಿ20 ಗುಂಪು, ವೇಳಾಪಟ್ಟಿ, ತಂಡಗಳ ಬಗ್ಗೆ ಶುಕ್ರವಾರ(ಡಿಸೆಂಬರ್ 11) ಐಸಿಸಿ ಪ್ರಕಟಣೆ ಹೊರಡಿಸಿದೆ.
ಮಾರ್ಚ್ 11ರಿಂದ ಏಪ್ರಿಲ್ 3 ರ ತನಕ ಭಾರತದಲ್ಲಿ ವಿಶ್ವಟಿ20 ಟೂರ್ನಿ ನಡೆಯಲಿದೆ.ಕೋಲ್ಕತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕೋಲ್ಕತಾ 28 ವರ್ಷಗಳ ನಂತರ ವಿಶ್ವಕಪ್ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.

ಬೆಂಗಳೂರು, ಚೆನ್ನೈ, ಧರ್ಮಶಾಲಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ನವದೆಹಲಿಯಲ್ಲಿ ವಿಶ್ವಕಪ್ ಟೂರ್ನಿಯ ಇತರ ಪಂದ್ಯಗಳು ನಡೆಯುತ್ತವೆ. ಚೆನ್ನೈನಲ್ಲಿ ಯಾವುದೇ ಪಂದ್ಯಗಳು ನಡೆಯುವುದಿಲ್ಲ. [ವಿಶ್ವ ಟಿ20ಗೆ ಚೆಂದದ ಲೋಗೋ]
ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 10 ತಂಡಗಳು ನೇರ ಪ್ರವೇಶ ಪಡೆಯುತ್ತವೆ. ಉಳಿದ ಆರು ಅಸೋಸಿಯೇಟ್ ದೇಶಗಳು ಐರ್ಲೆಂಡ್ ಹಾಗೂ ಸ್ಕಾಟ್ಲಂಡ್‌ನಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಅರ್ಹತಾ ಟೂರ್ನಿಗೆ ಆಯ್ಕೆಯಾಗಿವೆ.
ವಿಶ್ವ ಟಿ20 ಚಾಂಪಿಯನ್ಸ್
* 2007- ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಪಾಕಿಸ್ತಾನವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್.
* 2009-ಇಂಗ್ಲೆಂಡಿನಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾವನ್ನು 8 ವಿಕೆಟ್ ಗಳಿಂದ ಸೋಲಿಸಿದ ಪಾಕಿಸ್ತಾನ ಚಾಂಪಿಯನ್.
* 2010-ವೆಸ್ಟ್ ಇಂಡೀಸ್ ನಲ್ಲಿ ನಡೆದ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿ ಇಂಗ್ಲೆಂಡ್ ಚಾಂಪಿಯನ್.
* 2012- ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾವನ್ನು 36 ರನ್ ಗಳಿಂದ ಸೋಲಿಸಿ ವೆಸ್ಟ್ ಇಂಡೀಸ್ ಚಾಂಪಿಯನ್.
* 2014- ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯಲ್ಲಿ ಭಾರತವನ್ನು 6 ವಿಕೆಟ್ ಗಳಿಂದ ಸೋಲಿಸಿ ಶ್ರೀಲಂಕಾ ಚಾಂಪಿಯನ್.
(ಒನ್ ಇಂಡಿಯಾ ಸುದ್ದಿ)