ಧರ್ಮಶಾಲಾ, ಡಿ.14: ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ಸರಣಿಗೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. ಅದರೆ, ಮುಂದಿನ ವರ್ಷದ ವಿಶ್ವ ಟಿ20 ಸಮರಕ್ಕೆ ಈಗಲೇ ತಯಾರಿ ಆರಂಭವಾಗಿದೆ. ಟಿಕೆಟ್ ಬೇಡಿಕೆ ಹೆಚ್ಚಿದೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಧರ್ಮಶಾಲಾ ಕ್ರೀಡಾಂಗಣದ ಆಸನದ ಸಾಮರ್ಥ್ಯ ಹೆಚ್ಚಿಸಲಾಗಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಪ್ಪತ್ತು ಸಾವಿರ ಮಂದಿಗೆ ಆಸನ ವ್ಯವಸ್ಥೆ ಇದೆ. ಈಗ ಬೇಡಿಕೆ ಹೆಚ್ಚಿದ್ದರಿಂದ ಮುಂದಿನ ಟ್ವೆಂಟಿ-20 ವಿಶ್ವಕಪ್‌ಗಾಗಿ ಆಸನಗಳ ಸಾಮರ್ಥ್ಯವನ್ನು ಇನ್ನೂ ಐದು ಸಾವಿರ ಹೆಚ್ಚಿಸಲಾಗಿದೆ. ಇದರೊಂದಿಗೆ ಧರ್ಮಶಾಲಾ ಕ್ರೀಡಾಂಗಣದ ಆಸನಗಳ ಸಾಮರ್ಥ್ಯ 25,000ಕ್ಕೆ ಏರಲಿದೆ.[ಐಸಿಸಿ ವಿಶ್ವ ಟಿ20ಕಪ್ ವಿಶ್ವ ಪರ್ಯಟನೆ ಆರಂಭ]

ಧರ್ಮಶಾಲಾದಲ್ಲಿ 2016ರಲ್ಲಿ ಟ್ವೆಂಟಿ-20 ವಿಶ್ವಕಪ್‌ನ ಪಂದ್ಯವನ್ನು ಆಯೋಜಿಸಲು ಅವಕಾಶ ನೀಡಲಾಗಿದ್ದು, ಈ ಕಾರಣದಿಂದಾಗಿ ಆಸನಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಸಂಘಟಕರು ತೀರ್ಮಾನಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಪೆವಿಲಿಯನ್ ಹೊಟೇಲ್‌ನಲ್ಲಿ ಪಂಚತಾರಾ ಸೌಲಭ್ಯಗಳನ್ನು ಹೊಂದಿರುವ 30 ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ.[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]
ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ಇದೀಗ 100 ಕೊಠಡಿಗಳಿವೆ. ಆಟಗಾರರಿಗೆ ಇಲ್ಲಿ ಇಷ್ಟರ ತನಕ ಕೊಠಡಿಯ ಸಮಸ್ಯೆ ಇರಲಿಲ್ಲ.
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದೆ.
ಈ ಉದ್ದೇಶಕ್ಕಾಗಿ ಅಗತ್ಯ ನೆರವು ನೀಡುವಂತೆ ಹಿಮಾಚಲ ಸರಕಾರಕ್ಕೆ ಹಿಮಾಚಲ ಕ್ರಿಕೆಟ್ ಸಂಸ್ಥೆ ಮನವಿ ಸಲ್ಲಿಸಿದೆ ಎಂದು ಐಪಿಸಿಎ ವಕ್ತಾರ ಸಂಜಯ್ ಶರ್ಮ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾ.19ರಂದು ಭಾರತ ಇಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಮಾ.18ರಂದು ಸಾಂಪ್ರದಾಯಿಕ ಎದುರಾಳಿಗಳಾದ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಪಂದ್ಯ ನಡೆಯಲಿವೆ. ಧರ್ಮಶಾಲಾದಲ್ಲಿ ಮಾ.22 ಮತ್ತು ಮಾ.24ರಂದು ಮಹಿಳೆಯರ ಟ್ವೆಂಟಿ-20 ಪಂದ್ಯ ನಡೆಯಲಿವೆ. ವಿಶ್ವಕಪ್ ಮುಂದಿನ ಮಾರ್ಚ್ 8ರಿಂದ ಎಪ್ರಿಲ್ 3ರತನಕ ನಡೆಯಲಿದೆ.