
ಚೆನ್ನೈ, ಏಪ್ರಿಲ್ 24: ಅಮೋಘ 96 ರನ್ ಸಿಡಿಸಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಯ ತಂದುಕೊಟ್ಟ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್, ಬೇರೆ ತಂಡದಲ್ಲಿ ತಮ್ಮ ಕಳಪೆ ಫಾರ್ಮ್ ಕಂಡು ಆಡುವ 11ರ ಬಳಗದಿಂದ ಇಷ್ಟೊತ್ತಿಗೆ ಕಿತ್ತೊಗೆಯುತ್ತಿದ್ದರು ಎಂದು ಅಭಿಪ್ರಾಪಟ್ಟಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ವ್ಯಾಟ್ಸನ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಆದರೆ, ಸನ್‌ರೈಸರ್ಸ್ ಎದುರು ಮಂಗಳವಾರ ನಡೆದ ಪಂದ್ಯದಲ್ಲಿ ದಿಟ್ಟ ಆಟವಾಡಿ ಗಮನ ಸೆಳೆದರು. ಈ ಸಂದರ್ಭದಲ್ಲಿ ತಮ್ಮ ಮೇಲೆ ಭರವಸೆಯಿಟ್ಟು ತಂಡದಲ್ಲಿ ಮುಂದುವರಿಯುವ ಅವಕಾಶ ನೀಡಿದ ನಾಯಕ ಎಂ.ಎಸ್ ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್‌ಗೆ ಧನ್ಯವಾದ ತಿಳಿಸಿದ್ದಾರೆ.
ಪಂದ್ಯದಲ್ಲಿ 176 ರನ್‌ಗಳ ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಸಂಪಾದಿಸಿತ್ತು. ವ್ಯಾಟ್ಸನ್, 53 ಎಸೆತಗಳಲ್ಲಿ 9 ಫೋರ್ ಮತ್ತು 6 ಸ್ಫೋಟಕ ಸಿಕ್ಸರ್‌ಗಳೊಂದಿಗೆ 96 ರನ್‌ಗಳನ್ನು ಸಿಡಿಸಿ ಶತಕ ವಂಚಿತರಾದರು.
ಈ ಇನಿಂಗ್ಸ್‌ಗೂ ಮೊದಲು ಪ್ರಸಕ್ತ ಐಪಿಎಲ್‌ನಲ್ಲಿ ವ್ಯಾಟ್ಸನ್ ಅವರ ಶ್ರೇಷ್ಠ ಸ್ಕೋರ್ 44. ಹೀಗಾಗಿ ಇನ್ನೊಂದು ಪಂದ್ಯದಲ್ಲಿ ವ್ಯಾಟ್ಸನ್ ವಿಫಲರಾಗಿದ್ದರೂ ಅವರ ಸ್ಥಾನದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಆಡುವ 11ರ ಬಳಗೆ ಸೇರಿಕೊಳ್ಳುತ್ತಿದ್ದರು.
"ನಾನು ಆಡಿರುವ ಉಳಿದೆಲ್ಲಾ ತಂಡಗಳಲ್ಲಿ ನನ್ನ ಈ ರೀತಿಯ ಕಳಪೆ ಫಾರ್ಮ್‌ಗೆ ಇಷ್ಟೊತ್ತಿಗೆ ಆಡುವ 11ರ ಬಳಗದಿಂದ ಹೊರಗಿರುತ್ತಿದ್ದರು. ಆದರೆ, ಸೂಪರ್ ಕಿಂಗ್ಸ್ ನನ್ನ ಮೇಲೆ ಭರವಸೆ ಕಾಯ್ದುಕೊಂಡಿದೆ,'' ಎಂದು 37 ವರ್ಷದ ಆಲ್‌ರೌಂಡರ್ ವ್ಯಾಟ್ಸನ್ ಹೇಳಿದ್ದಾರೆ.
ಇದೇ ವೇಳೆ ಧೋನಿ ಕೂಡ ಆಸ್ಟ್ರೇಲಿಯಾದ ಹಿರಿಯ ಆಲ್‌ರೌಂಡರ್ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
"ಪ್ರತಿಯೊಬ್ಬರಿಗೂ ಒಂದಷ್ಟು ಪಂದ್ಯಗಳನ್ನು ನೀಡಬೇಕು. ವ್ಯಾಟ್ಸನ್ ನಮ್ಮ ಪಾಲಿಗೆ ಮ್ಯಾಚ್ ವಿನ್ನರ್. ನೆಟ್ಸ್‌ನಲ್ಲಿ ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಕೊಂಚ ಪರದಾಟ ನಡೆಸಿದರೂ ಈವರೆಗೆ ಆಡಿರುವ ಎಲ್ಲ ಪಂದ್ಯಗಳಲ್ಲಿ ಅವರು ಉತ್ತಮ ಹೊಡೆತಗಳನ್ನಾಡುತ್ತಿದ್ದರು. ಹೀಗಾಗಿ ಅವರಿಗೆ ಸಾಧ್ಯವಾದಷ್ಟು ಪಂದ್ಯಗಳನ್ನು ನೀಡುವ ಕಡೆಗೆ ತಂಡ ಆಲೋಚಿಸಿತ್ತು,'' ಎಂದು ಧೋನಿ ಹೇಳಿದ್ದಾರೆ.