
ಸೋಮವಾರ, ಮಾರ್ಚ್ 13ರಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡ ಪಂದ್ಯಾವಳಿಯಲ್ಲಿ ಸತತ ಐದನೇ ಸೋಲು ಕಂಡಿತು. ಹೀಗಾಗಿ 2023ರ ಪಂದ್ಯಾವಳಿಯಿಂದ ಹೊರಬಿದ್ದ ಮೊದಲ ತಂಡವೆಂಬ ಕುಖ್ಯಾತಿಗೆ ಒಳಗಾಯಿತು.
ಆರ್‌ಸಿಬಿ ನೀಡಿದ್ದ 151 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಕೊನೆಯ ಓವರ್‌ನಲ್ಲಿ 9 ರನ್‌ಗಳ ಅವಶ್ಯಕತೆ ಇದ್ದಾಗ ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ಜೆಸ್ ಜೊನಾಸ್ಸೆನ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕರಾದ ನಾಯಕಿ ಮೆಗ್ ಲ್ಯಾನ್ನಿಂಗ್ 15 ರನ್ ಗಳಿಸಿದರೆ, ಶಫಾಲಿ ವರ್ಮಾ ಸೊನ್ನೆ ಸುತ್ತಿದರು. ಆಲಿಸ್ ಕಾಪ್ಸೆ 38 ರನ್, ಜೆಮಿಮಾ ರೋಡ್ರಿಗಸ್ 32 ರನ್, ಮಾರಿಜಾನ್ನೆ ಕಾಪ್ ಅಜೇಯ 32 ರನ್, ಜೆಸ್ ಜೊನಾಸ್ಸೆನ್ ಅಜೇಯ 29 ರನ್ ಬಾರಿಸಿದರು.
ಇನ್ನು ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಆಶಾ ಶೋಬನಾ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮೆಗನ್ ಶುಟ್ ಮತ್ತು ಪ್ರೀತಿ ಬೋಸ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ ಎಲ್ಲಿಸ್ ಪೆರ್ರಿ ಅವರ ಅರ್ಧಶತಕ ಮತ್ತು ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು.

ಆರ್‌ಸಿಬಿ ತಂಡದ ಬ್ಯಾಟಿಂಗ್ ಆರಂಭಿಸಿದ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. 15 ಎಸೆತಗಳಲ್ಲಿ 8 ರನ್ ಗಳಿಸಿ ಆಡುತ್ತಿದ್ದ ಸ್ಮೃತಿ ಮಂಧಾನ ವಿಕೆಟ್ ಒಪ್ಪಿಸಿದರೆ, 21 ರನ್ ಗಳಿಸಿದ್ದ ಸೋಫಿ ಡಿವೈನ್ ಸಹ ಔಟಾದರು.
ನಂತರ ಬಂದ ಎಲ್ಲಿಸ್ ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 67 ರನ್ ಬಾರಿಸಿದರು. ಇನ್ನು ಹೀದರ್ ನೈಟ್ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ರಿಚಾ ಘೋಷ್ 16 ಎಸೆತಗಳಲ್ಲಿ ಸ್ಫೋಟಕ 37 ರನ್ ಬಾರಿಸಿದರೆ, ಕೊನೆಯಲ್ಲಿ ಬಂದ ಶ್ರೇಯಾಂಕ ಪಾಟೀಲ್ 4 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಿಖಾ ಪಾಂಡೆ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ತಾರಾ ನಾರ್ರಿಸ್ 3 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.