
ಗುರುವಾರ, ಮಾರ್ಚ್ 16ರಂದು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ್ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದ್ದು, ಮೆಗ್ ಲ್ಯಾನ್ನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 148 ರನ್‌ಗಳ ಗುರಿ ನೀಡಿದೆ.
ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿಯಾ ಡಂಕ್ಲೆ ಮತ್ತು ಲಾರಾ ವೊಲ್ವಾರ್ಡ್ಟ್ ಇನ್ನಿಂಗ್ಸ್ ಆರಂಭಿಸಿದರು. ಒಂದು ಓವರ್‌ನಲ್ಲಿ 4 ರನ್‌ಗಳಾಗುವಷ್ಟರಲ್ಲಿ ಸೋಫಿಯಾ ಡಂಕ್ಲೆ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಹರ್ಲೀನ್ ಡಿಯೋಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು.
33 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 31 ರನ್ ಗಳಿಸಿದ್ದ ಹರ್ಲೀನ್ ಡಿಯೋಲ್ ವಿಕೆಟ್ ಒಪ್ಪಿಸಿದರು. ಆಗ, ಲಾರಾ ವೊಲ್ವಾರ್ಡ್ಟ್ ಜೊತೆಗೂಡಿದ ಆಶ್ಲೇಗ್ ಗಾರ್ಡ್ನರ್ ಉತ್ತಮ ಜೊತೆಯಾಟ ನೀಡಿದರು.

ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ಟ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಔಟಾದರೆ, ಆಶ್ಲೇಗ್ ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 51 ರನ್ ಗಳಿಸಿ ಅಜೇಯರಾಗುಳಿದರು.
ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಜೆಸ್ ಜೊನಾಸ್ಸೆನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮರಿಜಾನ್ನೆ ಕಾಪ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.
ಮೆಗ್ ಲ್ಯಾನ್ನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳ ಅಂತರದಿಂದ ಮಣಿಸಿತ್ತು. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 55 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.
ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಆಡುವ 11ರ ಬಳಗ
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನ್ನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಾಪ್, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.
ಗುಜರಾತ್ ಜೈಂಟ್ಸ್ ತಂಡ: ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಳನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ.