WPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶಿಬಿರ ಸೇರಿಕೊಂಡ ಮೆಂಟರ್ ಸಾನಿಯಾ ಮಿರ್ಜಾ

2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್(WPL) ಪಂದ್ಯಾವಳಿಗಾಗಿ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದ್ದು, ಶನಿವಾರ, ಮಾರ್ಚ್ 4ರಂದು ಅದ್ಧೂರಿಯಾಗಿ ಚಾಲನೆ ಸಿಗಲಿದೆ. ಚೊಚ್ಚಲ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರೆಬೋರ್ನ್ ಸ್ಟೇಡಿಯಂನಲ್ಲಿ 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಒಟ್ಟು 22 ಪಂದ್ಯಗಳನ್ನು ಆಡಲಾಗುತ್ತದೆ. ಈಗಾಗಲೇ ಎಲ್ಲಾ ಐದೂ ತಂಡಗಳು ಮುಂಬೈ ತಲುಪಿದ್ದು, ತಮ್ಮ ಪಂದ್ಯಗಳಿಗಾಗಿ ಅಭ್ಯಾಸದಲ್ಲಿ ನಿರತವಾಗಿವೆ.
ಭಾರತದ ಮಾಜಿ ಟೆನಿಸ್ ಆಟಗಾರ್ತಿ ಹಾಗೂ ಆರ್‌ಸಿಬಿ ಮಹಿಳಾ ತಂಡದ ಮೆಂಟರ್ ಸಾನಿಯಾ ಮಿರ್ಜಾ ಅವರು ಭಾನುವಾರ, ಮಾರ್ಚ್ 5ರಂದು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡದ ಶಿಬಿರವನ್ನು ಸೇರಿಕೊಂಡರು.
ಕೆಲವು ದಿನಗಳ ಹಿಂದೆ ಆರ್‌ಸಿಬಿ ಫ್ರಾಂಚೈಸಿಯು ಮಹಿಳಾ ತಂಡದ ಮೆಂಟರ್ ಆಗಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಿತ್ತು. 20 ವರ್ಷಗಳ ಕಾಲ ಟೆನ್ನಿಸ್ ಕೋರ್ಟ್‌ನಲ್ಲಿ ಮಿಂಚಿದ ಸಾನಿಯಾ ಇತ್ತೀಚೆಗೆ ವೃತ್ತಿಪರ ಟೆನ್ನಿಸ್ ಆಟದಿಂದ ನಿವೃತ್ತರಾದರು.

ಆರ್‌ಸಿಬಿ ಶರ್ಟ್ ಧರಿಸಿ ತಂಡ ತಂಗಿರುವ ಹೋಟೆಲ್‌ನಲ್ಲಿ ಇಂಗ್ಲೆಂಡ್ ಆಟಗಾರ್ತಿ ಹೀಥರ್ ನೈಟ್ ಸೇರಿದಂತೆ ಇತರ ಆಟಗಾರ್ತಿಯರೊಂದಿಗೆ ಸಾನಿಯಾ ಮಿರ್ಜಾ ಮಾತನಾಡುತ್ತಿರುವ ಫೋಟೋಗಳನ್ನು ಆರ್‌ಸಿಬಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಇದೇ ವೇಳೆ ಮಾತನಾಡಿರುವ ಆರ್‌ಸಿಬಿ ನಿರ್ದೇಶಕ ಮೈಕ್ ಹೆಸ್ಸನ್, "ಸಾನಿಯಾ ಮಿರ್ಜಾ ಆಟಗಾರ್ತಿಯರಿಗೆ ಪರಿಪೂರ್ಣ ಮಾದರಿಯಾಗಿದ್ದಾರೆ. ಅವರು ಯಾವುದೇ ಕ್ರೀಡೆಯಿಂದ ಬರಲಿ, ಆದರೆ ಕ್ರೀಡಾಪಟುವಿನ ವಿಷಯದಲ್ಲಿ ಮಾನದಂಡಗಳಿಗೆ ಸವಾಲು ಹಾಕುತ್ತಾರೆ. ಅವರು ಒತ್ತಡವನ್ನು ಸ್ವೀಕರಿಸಲು ಬಯಸುತ್ತಾರೆ, ಸಾನಿಯಾ ಮಿರ್ಜಾ ಕ್ರೀಡೆಯಲ್ಲಿ ದೊಡ್ಡ ಐಕಾನ್ ಆಗಿದ್ದಾರೆ," ಎಂದು ತಿಳಿಸಿದರು.
ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚೆಗೆ ದುಬೈನಲ್ಲಿ ನಡೆದ ತಮ್ಮ ಕೊನೆಯ ವೃತ್ತಿಪರ ಟೆನ್ನಿಸ್ ಪಂದ್ಯವನ್ನು ಆಡಿದರು. 36 ವರ್ಷದ ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್ 2023ರಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಫೈನಲ್ ಪಂದ್ಯವಾಡಿದರು.
ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಟೆನ್ನಿಸ್ ಆಟವನ್ನು ಆಯ್ಕೆಮಾಡಿಕೊಳ್ಳಲು ಅನೇಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಸಿಂಗಲ್ಸ್‌ನಲ್ಲಿ ಭಾರತದಿಂದ ವಿಶ್ವದ ಅತ್ಯುತ್ತಮ ಶ್ರೇಯಾಂಕಿತ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ, ಸಿಂಗಲ್ಸ್ ಶ್ರೇಯಾಂಕದಲ್ಲಿ ಅಗ್ರ 30ರೊಳಗೆ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿಯೂ ಆಗಿದ್ದಾರೆ.
ಹೈದರಾಬಾದ್ ಮೂಲದ ಸಾನಿಯಾ ಮಿರ್ಜಾ ತನ್ನ ಟೆನ್ನಿಸ್ ವೃತ್ತಿಜೀವನವನ್ನು 6 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು ಸೇರಿದಂತೆ ಒಟ್ಟು 43 ಪ್ರಶಸ್ತಿಗಳೊಂದಿಗೆ ವಿದಾಯ ಹೇಳಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.27 ಮತ್ತು ಮಹಿಳಾ ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂಬರ್ 1 ಆಟಗಾರ್ತಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications