WPL 2023: ಆರ್‌ಸಿಬಿ ಮಹಿಳಾ ತಂಡದ ಕಳಪೆ ಪ್ರದರ್ಶನಕ್ಕೆ ನಿಖರ ಕಾರಣ ತಿಳಿಸಿದ ಪಾರ್ಥಿವ್ ಪಟೇಲ್

2023ರ ಮಹಿಳಾ ಪ್ರೀಮಿಯರ್ ಲೀಗ್‌ನ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಬುಧವಾರ, ಮಾರ್ಚ್ 9ರಂದು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು5ನೇ ಸ್ಥಾನದಲ್ಲಿವೆ. ಹೀಗಾಗಿ ಮೇಲೆ ಬರಲು ಉಭಯ ತಂಡಗಳಿಗೆ ಗೆಲವು ಅವಶ್ಯವಾಗಿದೆ.
ಆರ್‌ಸಿಬಿ ಮಹಿಳಾ ತಂಡದಲ್ಲಿ ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈನ್ ಮತ್ತು ಮೇಗನ್ ಶುಟ್ ಅವರಂತಹ ವಿದೇಶಿ ಸ್ಟಾರ್ ಆಟಗಾರ್ತಿಯರಿದ್ದರೂ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಇದೀಗ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ತಂಡದ ಸೋಲಿಗೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಕಾರಣ ತಿಳಿಸಿದ್ದಾರೆ.
"ವಿದೇಶಿ ಸ್ಟಾರ್ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಇದು ಆರ್‌ಸಿಬಿಗೆ ದೊಡ್ಡ ಚಿಂತೆಯಾಗಿದೆ. ಆರ್‌ಸಿಬಿ ಫ್ರಾಂಚೈಸಿ ಸಾಗರೋತ್ತರ ಆಟಗಾರ್ತಿಯರ ಮೇಲೆ ಹೆಚ್ಚು ಹೂಡಿಕೆ ಮಾಡಿದೆ, ಅದಕ್ಕೆ ತಕ್ಕಂತೆ ಅವರಿಂದ ಪ್ರದರ್ಶನ ಬರುತ್ತಿಲ್ಲ. ಆರ್‌ಸಿಬಿ ಶಿಬಿರದಲ್ಲಿ ಹೋರಾಟದ ಮನೋಭಾವ ಇಲ್ಲದಂತಾಗಿದೆ," ಎಂದು ಸ್ಪೋರ್ಟ್ಸ್18 ಮತ್ತು ಜಿಯೋ ಸಿನಿಮಾದ ವರ್ಚುವಲ್ ಕಾರ್ಯಕ್ರಮದಲ್ಲಿ ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟರು.

"ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಮಹಿಳಾ ತಂಡವನ್ನು ಪುರುಷರ ಆರ್‌ಸಿಬಿ ತಂಡದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ತಂಡವು ಸ್ಟಾರ್ ಆಟಗಾರ್ತಿಯರಿಂದ ತುಂಬಿದ್ದರೂ, ತಂಡವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಸತತ ಎರಡು ಸೋಲುಗಳಿಂದ ಪುಟಿದೇಳಲು ಆರ್‌ಸಿಬಿ ತಂಡಕ್ಕೆ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಅವಕಾಶವಿದೆ," ಎಂದು ಪಾರ್ಥಿವ್ ಪಟೇಲ್ ತಿಳಿಸಿದರು.
ಮತ್ತೊಂದೆಡೆ, "ಗುಜರಾತ್ ಜೈಂಟ್ಸ್ ತಂಡದ ಪರ ವೇಗದ ಬೌಲಿಂಗ್ ಆಲ್‌ರೌಂಡರ್ ಕಿಮ್ ಗಾರ್ತ್ ಅವರ 5 ವಿಕೆಟ್ ಗೊಂಚಲು ಹೊರತಾಗಿಯೂ, ಯುಪಿ ವಾರಿಯರ್ಸ್ ತಂಡದ ಗ್ರೇಸ್ ಹ್ಯಾರಿಸ್ ಪಂದ್ಯವನ್ನು ಗೆಲ್ಲಿಸಿದರು. ಗುಜರಾತ್ ಜೈಂಟ್ಸ್ ತಂಡದ ಸೋಲು ದುರದೃಷ್ಟಕರ ಎಂದ ಪಾರ್ಥಿವ್ ಪಟೇಲ್, ಆಡುವ 11ರ ಬಳಗದ ಎಲ್ಲರೂ ಒಂದು ತಂಡವಾಗಿ ಪ್ರದರ್ಶನ ನೀಡಬೇಕಾಗುತ್ತದೆ," ಎಂದು ಹೇಳಿದರು.

ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಬುಧವಾರದ ಪಂದ್ಯದಲ್ಲಿ ತಮ್ಮ ಕಳಪೆ ನೆಟ್ ರನ್‌ರೇಟ್ ಅನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. "ಎಲ್ಲಾ ಐದು ತಂಡಗಳು ತಮ್ಮ ನೆಟ್ ರನ್‌ರೇಟ್ ಉತ್ತಮವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದು ಪ್ಲೇಆಫ್‌ಗೆ ಮುನ್ನಡೆ ಪಡೆಯಲು ನಿರ್ಣಾಯಕ ಅಂಶವಾಗಿರುತ್ತದೆ," ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟರು.
ಆರ್‌ಸಿಬಿ vs ಗುಜರಾತ್ ಜೈಂಟ್ಸ್ ಸಂಭಾವ್ಯ ಆಡುವ 11ರ ಬಳಗ
ಗುಜರಾತ್ ಜೈಂಟ್ಸ್ ತಂಡ: ಸ್ನೇಹ್ ರಾಣಾ(ನಾಯಕಿ), ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಆಶ್ಲೀಗ್ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಕಿಮ್ ಗಾರ್ತ್, ದಯಾಳನ್ ಹೇಮಲತಾ, ತನುಜಾ ಕನ್ವರ್, ಮಾನ್ಸಿ ಜೋಶಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್), ಹೀಧರ್ ನೈಟ್, ಕನಿಕಾ ಅಹುಜಾ, ಮೇಗನ್ ಶುಟ್, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ರೇಣುಕಾ ಸಿಂಗ್ ಠಾಕೂರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications