
2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿ ಒಂದು ವಾರ ಕಳೆದಿದ್ದು, ಎಲ್ಲ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದರೆ, ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಆಡಿದ ಮೂರು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರ್‌ಸಿಬಿ ಮಹಿಳಾ ತಂಡದ ಸ್ಪಿನ್ ಆಲ್‌ರೌಂಡರ್ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಭಾರತದ ಮಾಜಿ ನಾಯಕ ಹಾಗೂ ಆರ್‌ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶವನ್ನು ಹೊಂದಿದ್ದ ಅದ್ಭುತ ಕ್ಷಣವನ್ನು ನೆನಪಿಸಿಕೊಂಡರು.
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಬ್ಯಾಟ್ ಮತ್ತು ಬೌಲಿಂಗ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಶ್ರೇಯಾಂಕಾ ಪಾಟೀಲ್, ಇದೀಗ 34 ವರ್ಷದ ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ನಾನು ಫ್ಯಾನ್ ಗರ್ಲ್ ಸಮಯವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
"ವಿರಾಟ್ ಕೊಹ್ಲಿ ನನ್ನ ಫೋನ್ ತೆಗೆದುಕೊಂಡು ನನ್ನೊಂದಿಗೆ ಸೆಲ್ಫೀ ಫೋಟೋ ಕ್ಲಿಕ್ ಮಾಡಿದರು. ಅವರು ನನ್ನ ತೋಳನ್ನು ಮುಟ್ಟಿದರು ಎಂದು ಹೇಳಲು ಬಯಸುತ್ತೇನೆ. ನಾನು ಶಾಲೆಗೆ ಹೋಗಿ ಬಂದಿದ್ದೆ, ವಿರಾಟ್ ಕೊಹ್ಲಿ ನನ್ನನ್ನು ಮುಟ್ಟಿದ್ದು ತುಂಬಾ ಸಂತೋಷವಾಗಿತ್ತು. ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಅವರನ್ನು ಭೇಟಿ ಮಾಡಿದ್ದೆ," ಎಂದು ಶ್ರೇಯಾಂಕಾ ಪಾಟೀಲ್ ಅವರು ಆರ್‌ಸಿಬಿ ಬೋಲ್ಡ್ ಡೈರೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.

"ನಾನು ವಿರಾಟ್ ಕೊಹ್ಲಿಯವರನ್ನು ಭೇಟಿಯಾಗಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಸಾಧ್ಯವಾಗದಿದ್ದರೂ, ಅವರೊಂದಿಗೆ ಫೋಟೋ ತೆಗೆದುಕೊಂಡಿರುವುದು ದೊಡ್ಡ ವಿಷಯ. ನಾನು ಆ ಫೋಟೋವನ್ನು ಫ್ರೇಮ್ ಮಾಡಿದ್ದೇನೆ. ನಂತರ ನಾನು ಯಾವಾಗಲಾದರೂ ಅವರನ್ನು ಭೇಟಿ ಮಾಡಿದಾಗ, ಆ ಫ್ರೇಮ್‌ನ ಮೇಲೆ ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೇನೆ," ಎಂದು ಶ್ರೇಯಾಂಕಾ ಪಾಟೀಲ್ ತಮ್ಮ ಆಸೆಯನ್ನು ಹಂಚಿಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆರ್‌ಸಿಬಿ ಪುರುಷರ ತಂಡದ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಿ ನಾನು ಆಶ್ಚರ್ಯಗೊಂಡಿದ್ದೆ ಎಂದು ಆರ್‌ಸಿಬಿ ಮಹಿಳಾ ತಂಡದ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಹೇಳಿದರು.
"ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಅಭ್ಯಾಸ ನಡೆಸಿದಾಗಲೆಲ್ಲ, ವಿರಾಟ್ ಕೊಹ್ಲಿಯವರನ್ನು ಭೇಟಿಯಾಗದಿದ್ದಲ್ಲಿ ಕನಿಷ್ಠ ಅವರ ಬ್ಯಾಟಿಂಗ್‌ನಾದರೂ ನೋಡಬೇಕು ಅಂತ ಅನಿಸುತ್ತಿತ್ತು," ಎಂದರು.
ಶ್ರೇಯಾಂಕಾ ಪಾಟೀಲ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 178.94ರ ಸ್ಟ್ರೈಕ್‌ರೇಟ್‌ನಲ್ಲಿ 23 ಗರಿಷ್ಠ ಸ್ಕೋರ್‌ನೊಂದಿಗೆ 34 ರನ್ ಗಳಿಸಿದ್ದಾರೆ. ಇದೇ ವೇಳೆ ಶ್ರೇಯಾಂಕಾ ಪಾಟೀಲ್ ತನ್ನ ಎರಡು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಸದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ.
2023ತರ ಐಪಿಎಲ್ 16ನೇ ಆವೃತ್ತಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
ಇನ್ನು ಆರ್‌ಸಿಬಿ ತಂಡವು ಎಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.