
ಬುಧವಾರ, ಮಾರ್ಚ್ 15ರಂದು ಮಹಿಳಾ ಪ್ರೀಮಿಯರ್ ಲೀಗ್‌ನ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಯುಪಿ ವಾರಿಯರ್ಸ್ ಮಹಿಳಾ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇದು ಆರ್‌ಸಿಬಿ ತಂಡಕ್ಕೆ ಪಂದ್ಯಾವಳಿಯ ಚೊಚ್ಚಲ ಗೆಲುವಾಗಿದೆ.
ಯುಪಿ ವಾರಿಯರ್ಸ್ ತಂಡ ನೀಡಿದ್ದ 136 ರನ್‌ಗಳ ಗುರಿಯನ್ನು ಆರ್‌ಸಿಬಿ ಮಹಿಳಾ ತಂಡವು 19.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ತಲುಪಿತು.
ಆರ್‌ಸಿಬಿ ತಂಡದ ಗೆಲುವಿನಲ್ಲಿ ಕನಿಕಾ ಅಹುಜಾ 30 ಎಸೆತಗಳಲ್ಲಿ 8 ಮತ್ತು 1 ಸಿಕ್ಸರ್ ನೆರವಿನಿಂದ 46 ರನ್ ಮತ್ತು ರಿಚಾ ಘೋಷ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿ ಪ್ರಮುಖ ಪಾತ್ರ ವಹಿಸಿದರು.
ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ ಸೊನ್ನೆ ಸುತ್ತಿದರೆ, ಸೋಫೊ ಡಿವೈನ್ 6 ಎಸೆತಗಳಲ್ಲಿ 14 ರನ್ ಗಳಿಸಿದರು. ಎಲ್ಲಿಸ್ ಪೆರ್ರಿ 10 ರನ್, ಹೀದರ್ ನೈಟ್ 24 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಬೌಲಿಂಗ್‌ನಲ್ಲಿ ಯುಪಿ ವಾರಿಯರ್ಸ್ ತಂಡದ ಪರ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಗ್ರೆಸ್ ಹ್ಯಾರಿಸ್, ಸೋಫಿ ಎಕ್ಲೆಸ್ಟೋನ್ ಮತ್ತು ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ 2.2 ಓವರ್‌ಗಳಾಗುವಷ್ಟರಲ್ಲಿ ನಾಯಕಿ ಅಲಿಸ್ಸಾ ಹೀಲಿ ವಿಕೆಟ್ ಕಳೆದುಕೊಂಡಿತು. ಇನ್ನು ತಂಡದ ಮೊತ್ತ 31 ರನ್‌ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಯುಪಿ ವಾರಿಯರ್ಸ್ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಎದುರಿಸಿತ್ತು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕುಸಿದಿದ್ದ ತಂಡವನ್ನು ಮೇಲೆತ್ತಿದರು. ಗ್ರೇಸ್ ಹ್ಯಾರಿಸ್ 32 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ 46 ರನ್ ಗಳಿಸಿದರೆ, ದೀಪ್ತಿ ಶರ್ಮಾ 19 ಎಸೆತಗಳಲ್ಲಿ 22 ರನ್ ಗಳಿಸಿ ಮಿಂಚಿದರು.

ಒಂದು ಹಂತದಲ್ಲಿ ಇವರಿಬ್ಬರೂ ದೊಡ್ಡ ಮೊತ್ತದ ಸೂಚನೆ ನೀಡಿದ್ದ ಈ ಜೋಡಿಯನ್ನು ಎಲ್ಲಿಸ್ ಪೆರ್ರಿ ಒಂದೇ ಓವರ್‌ನಲ್ಲಿ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಅಂತಿಮವಾಗಿ ಯುಪಿ ವಾರಿಯರ್ಸ್ 135 ರನ್‌ಗಳಿಗೆ ಆಲೌಟ್ ಆಯಿತು.
ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಸೋಫಿ ಡಿವೈನ್ ಎರಡು ವಿಕೆಟ್ ಪಡೆದು ಮಿಂಚಿದರೆ, ಆಶಾ ಶೋಭನಾ ಕೂಡ ಎರಡು ವಿಕೆಟ್ ಪಡೆದರು. ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಎಲ್ಲಿಸ್ ಪೆರ್ರಿ ಮೂರು ವಿಕೆಟ್ ಕಬಳಿಸಿದರು. ಮೇಗನ್ ಶುಟ್ ಮತ್ತು ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದರು.
ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡ, ಆಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಮತ್ತು ಒಂದು ಗೆಲುವಿನ ಮೂಲಕ 2 ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ರನ್‌ರೇಟ್ ವ್ಯತ್ಯಾಸದೊಂದಿಗೆ ಗುಜರಾತ್ ಜೈಂಟ್ಸ್ ಐದನೇ ಸ್ಥಾನಕ್ಕೆ ಕುಸಿದಿದೆ.