
ಈಗಾಗಲೇ ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಶೀರ್ಷಿಕೆ ಹಕ್ಕು ಹೊಂದಿರುವ ಟಾಟಾ ಗ್ರೂಪ್, ಇದೀಗ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಶೀರ್ಷಿಕೆ ಹಕ್ಕುಗಳನ್ನು ಸಹ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯು ಮಾರ್ಚ್ 4ರಿಂದ ಆರಂಭವಾಗಲಿದೆ.
ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಹಕ್ಕುಗಳನ್ನು ಭಾರತದ ವ್ಯಾಪಾರ ಸಮೂಹ ಟಾಟಾ ಗ್ರೂಪ್ ಮಂಗಳವಾರ ಪಡೆದುಕೊಂಡಿದೆ ಎಂದು ಬಿಸಿಸಿಐ ತಿಳಿಸಿದೆ.
"ಟಾಟಾ ಗ್ರೂಪ್ ಅನ್ನು ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಘೋಷಿಸಲು ನನಗೆ ಸಂತೋಷವಾಗಿದೆ. ಟಾಟಾ ಗ್ರೂಪ್ ಬೆಂಬಲದೊಂದಿಗೆ ನಾವು ಮಹಿಳಾ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು ಎಂಬ ವಿಶ್ವಾಸ ನಮಗಿದೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದು, ಒಪ್ಪಂದದ ಹಣಕಾಸು ಬಗ್ಗೆ ಬಹಿರಂಗಪಡಿಸಿಲ್ಲ.
ಮಹಿಳಾ ಪ್ರೀಮಿಯರ್ ಲೀಗ್‌ನ ಐದು ವರ್ಷಗಳ ಶೀರ್ಷಿಕೆ ಹಕ್ಕುಗಳನ್ನು ಟಾಟಾ ಗ್ರೂಪ್ ಪಡೆದುಕೊಂಡಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಭಾರತೀಯ ಮೂಲದ ವ್ಯಾಪಾರ ಸಂಸ್ಥೆಯು ಕಳೆದ ವರ್ಷ ವಿವೊವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಶೀರ್ಷಿಕೆ ಪ್ರಾಯೋಜಕ ಹಕ್ಕಿಗಾಗಿ ಹಿಂದಿಕ್ಕಿತ್ತು. ಉದ್ಘಾಟನಾ ಪಂದ್ಯಾವಳಿಯು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎರಡು ಸ್ಥಳಗಳಲ್ಲಿ ನಡೆಯಲಿದೆ.
ಮಾಧ್ಯಮ ಹಕ್ಕುಗಳ ಮಾರಾಟದಿಂದ ಬಿಸಿಸಿಐಗೆ 951 ಕೋಟಿ ರೂ. ಹರಿದು ಬಂದಿದ್ದರೆ, ಐದು ತಂಡಗಳು 4700 ಕೋಟಿ ರೂ.ಗೆ ಮಾರಾಟವಾಗಿವೆ. ಫೆಬ್ರವರಿ 13ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 3.40 ಕೋಟಿ ರೂ.ಗೆ ಅತ್ಯಧಿಕ ಬೆಲೆಗೆ ಮಾರಾಟವಾಗಿದ್ದಾರೆ.
ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ (WPL) 2023ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಉದ್ಘಾಟನಾ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಐದು ತಂಡಗಳು ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಯಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನು ಪಡೆಯಲು ಖರ್ಚು ಮಾಡಿದ್ದಾರೆ.
ಮೊದಲ ಋತುವಿನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಒಟ್ಟು 20 ಲೀಗ್ ಪಂದ್ಯಗಳನ್ನು ಮತ್ತು 2 ಪ್ಲೇಆಫ್ ಪಂದ್ಯಗಳನ್ನು 23 ದಿನಗಳ ಅವಧಿಯಲ್ಲಿ ಆಡಲಾಗುತ್ತದೆ.
ಮಾರ್ಚ್ 4ರಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದೊಂದಿಗೆ ಲೀಗ್ ಪ್ರಾರಂಭವಾಗಲಿದೆ.