
ಭಾನುವಾರ, ಮಾರ್ಚ್ 5ರಂದು ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ ಯುಪಿ ವಾರಿಯರ್ಸ್ ತಂಡ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ನೇಹ್ ರಾಣಾ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ, ಯುಪಿ ವಾರಿಯರ್ಸ್ ತಂಡ 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ, 3 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಕಿರಣ್ ನವಗಿರೆ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 53 ರನ್ ಗಳಿಸಿದರೆ, ಸೋಫಿ ಎಕ್ಲೆಸ್ಟೋನ್ 22 ರನ್, ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ 26 ಎಸೆತಗಳಲ್ಲಿ 59 ರನ್ ಬಾರಿಸಿ ಯುಪಿ ವಾರಿಯರ್ಸ್ ತಂಡಕ್ಕೆ ಗೆಲುವು ತಂದಿತ್ತರು.

ಒಂದು ಹಂತದಲ್ಲಿ 88 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಯುಪಿ ವಾರಿಯರ್ಸ್ ತಂಡಕ್ಕೆ ಆಸರೆಯಾಗಿದ್ದು ಗ್ರೇಸ್ ಹ್ಯಾರಿಸ್. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಂತಿಮ ಓವರ್‌ನಲ್ಲಿ ಜಯ ತಂದುಕೊಟ್ಟರು.
ಬೌಲಿಂಗ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಕಿಮ್ ಗ್ರಾತ್ 4 ಓವರ್‌ಗಳಲ್ಲಿ 36 ರನ್ ನೀಡಿ 5 ವಿಕೆಟ್‌ಗಳ ಗೊಂಚಲು ಪಡೆದರು. ಉಳಿದಂತೆ ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ಮಾನ್ಸಿ ಜೋಶಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ಜೈಂಟ್ಸ್, ಸಬ್ಬಿನೇನಿ ಮೇಘನಾ ಮತ್ತು ಸೋಫಿಯಾ ಡಂಕ್ಲಿ ಮೊದಲ ವಿಕೆಟ್‌ಗೆ 3.5 ಓವರ್‌ಗಳಲ್ಲಿ 34 ರನ್ ಜೊತೆಯಾಟ ನೀಡಿದರು. ಈ ವೇಳೆ 13 ರನ್ ಗಳಿಸಿದ್ದ ಸೋಫಿಯಾ ಡಂಕ್ಲಿ ಔಟಾದರು. ಸಬ್ಬಿನೇನಿ ಮೇಘನಾ 24 ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹರ್ಲೀನ್ ಡಿಯೋಲ್ 32 ಎಸೆತಗಳಲ್ಲಿ 7 ಬೌಂಡರಿಗಳ ಸಮೇತ 46 ರನ್ ಚಚ್ಚಿದರು.
ಅನ್ನಾಬೆಲ್ ಸದರ್ಲ್ಯಾಂಡ್ 8 ರನ್, ಸುಷ್ಮಾ ವರ್ಮಾ 9 ರನ್, ಆಶ್ಲೀಗ್ ಗಾರ್ಡ್ನರ್ 25 ರನ್ ಗಳಿಸಿ ಔಟಾದರೆ, ದಯಾಳನ್ ಹೇಮಲತಾ 13 ಎಸೆತಗಳಲ್ಲಿ ಅಜೇಯ 21 ರನ್ ಮತ್ತು ಸ್ನೇಹ್ ರಾಣಾ ಅಜೇಯ 9 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಯುಪಿ ವಾರಿಯರ್ಸ್ ಪರ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರೆ, ಸೋಫಿ ಎಕ್ಲೆಸ್ಟೋನ್ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅಂಜಲಿ ಶರ್ವಾಣಿ ಮತ್ತು ತಹ್ಲಿಯಾ ಮೆಗ್ರಾತ್ ತಲಾ ಒಂದೊಂದು ವಿಕೆಟ್ ಪಡೆದಿದ್ದರು.