
ಸೋಮವಾರ, ಫೆಬ್ರವರಿ 13ರಂದು ಮುಂಬೈನಲ್ಲಿ ನಡೆದ 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಪ್ರಮುಖ ಆಲ್‌ರೌಂಡರ್ ಆಶ್ಲೀಗ್ ಗಾರ್ಡ್ನರ್ ಅವರನ್ನು ಗುಜರಾತ್ ಜೈಂಟ್ಸ್ ತಂಡ ದೊಡ್ಡ ಮೊತ್ತಕ್ಕೆ ಖರೀದಿಸಿತು.
ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಆಶ್ಲೀಗ್ ಗಾರ್ಡ್ನರ್ ಅವರು 3.20 ಕೋಟಿ ರೂಪಾಯಿಗಳಿಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಖರೀದಿಯಾಗಿದ್ದಾರೆ. ಇವರ ಮೂಲಬೆಲೆ 50 ಲಕ್ಷ ರೂ. ಆಗಿತ್ತು.
3.20 ಕೋಟಿ ರೂ.ಗೆ ಮಾರಾಟವಾಗಿರುವ ಆಶ್ಲೀಗ್ ಗಾರ್ಡ್ನರ್ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಜಂಟಿ ಎರಡನೇ ಅತಿ ದುಬಾರಿ ಆಟಗಾರ್ತಿಯಾಗಿದ್ದಾರೆ. ಮೊದಲ ಸ್ಥಾನದಲ್ಲಿ ಸ್ಮೃತಿ ಮಂಧಾನ 3.40 ಕೋಟಿ ರೂ.ಗೆ ಆರ್‌ಸಿಬಿ ತಂಡದ ಪಾಲಾಗಿದ್ದರೆ, ನತಾಲೀ ಸಿವರ್ ಕೂಡ 3.20 ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟವಾದರು.
ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪೈಪೋಟಿಯುತ ಬಿಡ್ಡಿಂಗ್‌ನಲ್ಲಿ ಅಂತಿಮವಾಗಿ, ಗುಜರಾತ್ ಜೈಂಟ್ಸ್ ಎಲ್ಲರನ್ನು ಹಿಂದಿಕ್ಕಿ ಆಶ್ಲೀಗ್ ಗಾರ್ಡ್ನರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಆಸ್ಟ್ರೇಲಿಯಾ ತಂಡದೊಂದೊಗೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಆಶ್ಲೀಗ್ ಗಾರ್ಡ್ನರ್ ತಮ್ಮ ಬ್ಯಾಟಿಂಗ್ ಮತ್ತು ಆಫ್ ಸ್ಪಿನ್ ಬೌಲಿಂಗ್‌ನಿಂದಾಗಿ ಯಾವುದೇ ತಂಡಕ್ಕೆ ಪ್ರಮುಖ ಆಲ್‌ರೌಂಡರ್ ಆಗಿರುತ್ತಾರೆ.
25 ವರ್ಷದ ಆಶ್ಲೀಗ್ ಗಾರ್ಡ್ನರ್ 2021-22ನೇ ಸಾಲಿನ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಅತ್ಯುತ್ತಮ ಮಹಿಳಾ ಅಂತಾರಾಷ್ಟ್ರೀಯ ಆಟಗಾರ್ತಿಯಾದರು. ಆಶ್ಲೀಗ್ ಗಾರ್ಡ್ನರ್ ಪ್ರಸ್ತುತ ನಂ.1 ಟಿ20 ಆಲ್‌ರೌಂಡರ್ ಆಗಿದ್ದಾರೆ.
ಆಶ್ಲೀಗ್ ಗಾರ್ಡ್ನರ್ ಫೆಬ್ರವರಿ 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಅನಂತರ ಅದೇ ತಂಡದ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು.