WTC Final: ಗಿಲ್ vs ರಾಹುಲ್; ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಯಾರು ಆರಂಭಿಸಬೇಕು?; ಸೌರವ್ ಗಂಗೂಲಿ ಉತ್ತರವೇನು?

2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅರ್ಹತೆ ಪಡೆದಿದ್ದು, ಜೂನ್ 11ರಿಂದ 15ರ ವರೆಗೆ ಇಂಗ್ಲೆಂಡ್‌ನ ದಿ ಓವಲ್‌ನಲ್ಲಿ ಐಸಿಸಿ ಪ್ರಶಸ್ತಿ ಹಣಾಹಣಿ ಪಂದ್ಯ ನಡೆಯಲಿದೆ.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ತಂಡದ ಆಡುವ ಬಳಗಕ್ಕಾಗಿ ಸಾಕಷ್ಟು ಪೈಪೋಟಿ ಇದ್ದು, ಅಂತಿಮವಾಗಿ ಯಾರು ಅವಕಾಶ ಪಡೆಯಲಿದ್ದಾರೆ ಕುತೂಹಲ ಮೂಡಿಸಿದೆ. ತವರಿನ ಹೊರಗೆ ನಡೆಯಲಿರುವ ಕಾರಣ, ವಿದೇಶಿ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಮಣೆ ಹಾಕಲು ತಂಡದ ಮ್ಯಾನೇಜ್‌ಮೆಂಟ್ ಯೋಚಿಸುತ್ತಿದೆ.
ಇನ್ನು ಭಾರತ ತಂಡದ ಆರಂಭಿಕ ಸ್ಥಾನದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದು ದೊಡ್ಡ ಚರ್ಚೆಯಾಗುತ್ತಿದೆ. ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಾಗಿ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ.

ಕೆಎಲ್ ರಾಹುಲ್ ಅವರ ಆಯ್ಕೆ ಅಸಂಭವ
ವಿದೇಶಿ ಪರಿಸ್ಥಿತಿಗಳಲ್ಲಿ ಭಾರತದ ಆದ್ಯತೆಯ ಆರಂಭಿಕನಾಗಿ ಕೆಎಲ್ ರಾಹುಲ್ ಹಿಂದಿನ ಯಶಸ್ಸಿನ ಹೊರತಾಗಿಯೂ, ಕಳೆದ ಆರು ತಿಂಗಳುಗಳಲ್ಲಿ ಎಲ್ಲಾ ಮೂರು ಸ್ವರೂಪದ ಆಟದಲ್ಲಿ ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕಳಪೆ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಅವರ ಅಸಂಭವ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಸೌರವ್ ಗಂಗೂಲಿ ಪ್ರಕಾರ, ಶುಭ್ಮನ್ ಗಿಲ್ ಸದ್ಯ ಎಲ್ಲಾ ಫಾರ್ಮ್ಯಾಟ್ ಪಂದ್ಯಗಳಲ್ಲಿ ಭಾರತ ತಂಡದ ಆದ್ಯತೆಯ ಆರಂಭಿಕ ಬ್ಯಾಟರ್ ಆಗಿದ್ದು, ಇದು ಆರಂಭಿಕ ಸ್ಥಾನದ ಬಗ್ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕಠಿಣ ಪರಿಸ್ಥಿತಿ ತಂದೊಡ್ಡಿದೆ.

ಶುಭ್ಮನ್ ಗಿಲ್ ಭಾರತ ತಂಡದ ಖಾಯಂ ಸದಸ್ಯ
"ಕಳೆದ ಆರೇಳು ತಿಂಗಳುಗಳಲ್ಲಿ ಶುಭ್ಮನ್ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆತ ಇನ್ನೇನು ಮಾಡಬೇಕಿದೆ? ಹಾಗಾಗಿ ಗಿಲ್ ಭಾರತ ತಂಡದ ಖಾಯಂ ಸದಸ್ಯರಾಗಿದ್ದಾರೆ," ಎಂದು ಸೌರವ್ ಗಂಗೂಲಿ ದೆಹಲಿ ಕ್ಯಾಪಿಟಲ್ಸ್‌ನ ಪ್ರಿ-ಐಪಿಎಲ್ 2023 ಶಿಬಿರದ ವೇಳೆ ಕೋಲ್ಕತ್ತಾದಲ್ಲಿ ಅಭಿಪ್ರಾಯಪಟ್ಟರು.
"ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದಕ್ಕಾಗಿ ನಾನು ಭಾರತ ತಂಡವನ್ನು ಅಭಿನಂದಿಸುತ್ತೇನೆ. ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾ ತಂಡವನ್ನು ಅವರ ನೆಲ ಮತ್ತು ತವರಿನಲ್ಲಿ ಸೋಲಿಸಿದ ಕಾರಣ, ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿಯೂ ಸೋಲಿಸುತ್ತದೆ. ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಬ್ಯಾಟಿಂಗ್ ಪ್ರಮುಖ ಅಂಶವಾಗಲಿದೆ. ಅಲ್ಲಿನ ಪರಿಸ್ಥಿಗಳಲ್ಲಿ 350 ರಿಂದ 400 ರನ್ ಮಾಡಿದರೆ, ತಂಡವು ಗೆಲ್ಲುತ್ತದೆ," ಎಂದು ಸೌರವ್ ಗಂಗೂಲಿ ಹೇಳಿದರು.

ವಿಶ್ವ ನಂ.1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ
ವಿಶ್ವ ನಂ.1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ ಮತ್ತು ನಂ.2 ಟೆಸ್ಟ್ ತಂಡವಾಗಿರುವ ಭಾರತ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.
ಐಪಿಎಲ್ ಸಮಯದಲ್ಲಿ ಭಾರತೀಯ ಬೌಲರ್‌ಗಳು ಕೆಂಪು ಬಾಲ್‌ನೊಂದಿಗೆ ತರಬೇತಿ ಪಡೆಯಲಿದ್ದಾರೆ ಎಂದು ರೋಹಿತ್ ಶರ್ಮಾ ಈಗಾಗಲೇ ತಿಳಿಸಿದ್ದು, ಲೀಗ್ ಹಂತದಲ್ಲಿ ಎಲಿಮಿನೇಟ್ ಆಗುವ ತಂಡಗಳ ಟೆಸ್ಟ್ ಆಟಗಾರರು ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

ಭಾರತ ತಂಡವು ಮೇ 22ರಂದು ಲಂಡನ್‌ಗೆ ಪ್ರವಾಸ
ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡವು ಮೇ 22ರಂದು ಲಂಡನ್ ಶಿಬಿರಕ್ಕೆ ತೆರಳುವ ನಿರೀಕ್ಷೆಯಿದ್ದು, ಐಪಿಎಲ್ ಪ್ಲೇಆಫ್ ಮತ್ತು ಫೈನಲ್‌ನಲ್ಲಿ ಭಾಗವಹಿಸುವ ಆಟಗಾರರು ನಂತರದಲ್ಲಿ ತಂಡವನ್ನು ಕೂಡಿಕೊಳ್ಳುತ್ತಾರೆ.
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾವನ್ನು ಎರಡು ವಿಕೆಟ್‌ಗಳಿಂದ ನ್ಯೂಜಿಲೆಂಡ್ ಸೋಲಿಸಿತು. ಇದು ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications