ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಫೈನಲ್ ಪಂದ್ಯದ ಮುಕ್ತಾಯದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್ ಕ್ರಿಕೆಟ್‌ನ ಎರಡು ಅಗ್ರ ತಂಡಗಳ ನಡುವಿನ ಈ ಕದನ ನೋಡಲು ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈ ಕುತೂಹಲಕಾರಿ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ವಿಚಾರವಾಗಿ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದು ಅಮೋಘ ಲಯದಲ್ಲಿದ್ದಾರೆ. ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕದ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಈ ಪ್ರದರ್ಶನದ ಬಳಿಕ ರಿಕಿ ಪಾಂಟಿಂಗ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಆಸಿಸ್ ತಂಡಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್‌ಗೆ ಮತ್ತೆ ಮರಳಿದ್ದಾರೆ ಎಂದಿದ್ದಾರೆ. ಹಾಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಆಸ್ಟ್ರೇಲಿಯಾ ತಂಡಕ್ಕೆ ಅತ್ಯಂತ ಹೆಚ್ಚು ದುಬಾರಿ ವಿಕೆಟ್ ಎನಿಸಲಿದೆ ಎಂದಿದ್ದಾರೆ ರಿಕಿ ಪಾಂಟಿಂಗ್.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಐಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಹಿದ್ದ ರಿಕಿ ಪಾಂಟಿಂಗ್ ಈ ಮಾತನ್ನಾಡಿದ್ದಾರೆ. ಪಾಂಟಿಂಗ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡದ ಮುಖ್ಯ ಕೋಚ್ ಆಗಿ ಜವಾಬ್ಧಾರಿ ವಹಿಸುತ್ತಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
"ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಾನು ಕೊಹ್ಲಿಯನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ನಾವಿಬ್ಬರು ಕೆಲ ಕಾಲ ಉತ್ತಮ ಮಾತುಕತೆಯನ್ನು ನಡೆಸಿದ್ದೆವು. ಅವರ ಬ್ಯಾಟಿಂಗ್, ಅವರ ವೃತ್ತಿ ಜೀವನದ ವಿಚಾರವಾಗಿ ಮಾತುಕತೆಗಳು ನಡೆದವು. ಆ ಸಂದರ್ಭದಲ್ಲಿ ಅವರು ತಾನು ತನ್ನ ಅತ್ಯುತ್ತಮ ಲಯಕ್ಕೆ ಮರಳಿದಂತೆ ಭಾಸವಾಗುತ್ತಿದೆ ಎಂದಿದ್ದರು" ಎಂದು ರಿಕಿ ಪಾಂಟಿಂಗ್ ಹೇಳಿಕೊಂಡಿದ್ದಾರೆ.
"ಕಳೆದ ರಾತ್ರಿ ನೀವೆಲ್ಲಾ ವಿರಾಟ್ ಕೊಹ್ಲಿಯ ಬ್ಯಾಟಿಂಗನ್ನು ನೋಡಿರುತ್ತೀರಿ. ಅವರು ಈ ಬಾರಿ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಖಂಡಿತವಾಗಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಅತ್ಯಂತ ದುಬಾರಿ ಎನಿಸಿಕೊಳ್ಳಲಿದೆ. ಆಸ್ಟ್ರೇಲಿಯಾದ ಆಟಗಾರರು ಅವರ ವಿಕೆಟ್ ಪಡೆಯಲು ಚಿತ್ತ ನೆಡಲಿದ್ದಾರೆ" ಎಂದಿದ್ದಾರೆ ರಿಕಿ ಪಾಂಟಿಂಗ್.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಇಂಗ್ಲೆಂಡ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೂನ್ 7ರಂದು ಈ ಪಂದ್ಯ ಆರಂಭವಾಗಲಿದ್ದು 11ರವರೆಗೆ ನಡೆಯಲಿದೆ. ಕಳೆದ ಬಾರಿಯ ರನ್ನರ್‌ಅಪ್ ತಂಡವಾಗಿರುವ ಭಾರತ ಈ ಬಾರಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದ್ದು ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸಿಸ್ ತಂಡದ ಸವಾಲನ್ನು ಯಾವ ರೀತಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.