ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಎನಿಸಿಕೊಳ್ಳಲು ಭಾರತ ತಂಡಕ್ಕೆ ಮತ್ತೊಂದು ಅವಕಾಶ ದೊರೆತಿದೆ. ಕಳೆದ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈಗ ಮತ್ತೊಮ್ಮೆ ಫೈನಲ್‌ಗೆ ಪ್ರವೇಶಿಸಿದ್ದು ಚಾಂಪಿಯನ್ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ. ಪ್ರಸ್ತುತ ಲಂಡನ್‌ನ ಓವಲ್‌ನಲ್ಲಿ ಟೀಮ್ ಇಂಡಿಯಾ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗುತ್ತಿದೆ.
ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾದ ಬಲಿಷ್ಠ ತಂಡವನ್ನು ಹೆಸರಿಸಿದ್ದಾರೆ. ಈ ತಮಡದೊಂದಿಗೆ ಕಣಕ್ಕಿಳಿದರೆ ಟೀಮ್ ಇಂಡಿಯಾ ಚಾಂಪಿಯನ್ ಎನಿಸಿಕೊಳ್ಳುವ ವಿಶ್ವಾಸ ಹೊಂದಿದ್ದಾರೆ ಗವಾಸ್ಕರ್. ಹಾಗಾದರೆ ಗವಾಸ್ಕರ್ ಹೆಸರಿಸಿದ ಈ ತಂಡದಲ್ಲಿ ಯಾವೆಲ್ಲಾ ಆಟಗಾರರು ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ? ಮುಂದೆ ಓದಿ..

ಸುನಿಲ್ ಗವಾಸ್ಕರ್ ಹೆಸರಿಸಿದ ಈ ಆಡುವ ಬಳಗದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿಗಳು ಇಲ್ಲ. ಇನ್ನು ವಿಕೆಟ್ ಕೀಪರ್‌ನ ವಿಚಾರವಾಗಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. "ನಾನು ಬ್ಯಾಟಿಂಗ್ ಮೂಲಕ ಮುಂದುವರಿಯುತ್ತೇನೆ, ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಆರಂಬಿಕರಾಗಿ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಐದನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ" ಎಂದಿದ್ದಾರೆ ಗವಾಸ್ಕರ್.
ಮುಂದುವರಿದು ಗವಾಸ್ಕರ್ "ನಾನು ಆರನೇ ಕ್ರಮಾಂಕದಲ್ಲಿ ಕೆಎಸ್ ಭರತ್ ಅಥವಾ ಇಶಾನ್ ಕಿಶನ್ ಇಬ್ಬರನ್ನು ಕೂಡ ಊಹಿಸಿಕೊಳ್ಳುತ್ತಿದ್ದೇನೆ. ಕೆಎಸ್ ಭರತ್ ಈ ಹಿಂದಿನ ಪಂದ್ಯಗಳನ್ನು ಆಡಿರುವ ಕಾರಣಕ್ಕೆ ಅವರ ಹೆಸರು ಕೇಳಿಬರುತ್ತಿದೆ. ಹಾಗಾಗಿ ನಾನು ಕೂಡ ಆರನೇ ಕ್ರಮಾಂಕಕ್ಕೆ ಕೆಎಸ್ ಭರತ್ ಅವರನ್ನೇ ಆಯ್ಕೆ ಮಾಡುತ್ತೇನೆ" ಎಂದಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಇಬ್ಬರನ್ನು ಕೂಡ ಗವಾಸ್ಕರ್ ಆಯ್ಕೆ ಮಾಡಿದ್ದಾರೆ. ಅಂದರೆ ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಲಹೆ ನೀಡಿದ್ದಾರೆ. "7ನೇ ಕ್ರಮಾಂಕದಲ್ಲಿ ರವೀಮದ್ರ ಜಡೇಜಾ ಅವರನ್ನು ಆಯ್ಕೆ ಮಾಡುತ್ತೇನೆ. ಬಿಸಿಲಿನ ವಾತಾವರಣವಿದ್ದು ಬಿಸಿಲು ಮುಂದುವರಿಯುವ ಸೂಚನೆಯಿದ್ದರೆ ಜಡೇಜಾ ಹಾಗೂ ಆಶ್ವಿನ್ ಇಬ್ಬರನ್ನು ಕೂಡ ಆಡಿಸಲು ಬಯಸುತ್ತೇನೆ. ಜಡೇಜಾ 7 ಹಾಗೂ ಅಶ್ವಿನ್ 8ನೇ ಕ್ರಮಾಂಕದಲ್ಲಿ ಆಡುತ್ತಾರೆ. ನಂತರ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್" ಎಂದು ತಂಡವನ್ನು ಆಯ್ಕೆ ಮಾಡಿದ್ದಾರೆ.
WTC ಫೈನಲ್‌ಗೆ ಸುನಿಲ್ ಗವಾಸ್ಕರ್ ಆಯ್ಕೆಯ ಆಡುವ ಬಳಗ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್
ಆಸ್ಟ್ರೇಲಿಯಾ ಸಂಪೂರ್ಣ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ಉಪನಾಯಕ) , ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್
ಟೀಮ್ ಇಂಡಿಯಾ ಸಂಪೂರ್ಣ ತಂಡ: ರೋಹಿತ್ ಶರ್ಮಾ(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್