ಪ್ರಸಕ್ತ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ ಯಶಸ್ವಿ ಜೈಸ್ವಾಲ್. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ರನ್ ಮಹಲ್ ಕಟ್ಟುತ್ತಿರುವ ಯುವ ಪ್ರತಿಭೆ. ಇವರು ಸದ್ಯ ವಿಶ್ವ ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆಯ ರೀತಿ ಮಿಂಚುತ್ತಿದ್ದಾರೆ. 2024ರಲ್ಲಿ ಇವರ ಬ್ಯಾಟ್ ಆರ್ಭಟ ಜೋರಾಗಿದೆ. ಇವರು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಈ ಯಂಗ್ ಪ್ಲೇಯರ್ ಈಗ ತನ್ನದೇ ರೋಲ್ ಮಾಡೆಲ್ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದೇ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆಯನ್ನು ಸಹ ಯಶಸ್ವಿ ತಮ್ಮದಾಗಿಸಿಕೊಂಡಿದ್ದರು. ಆದರೆ ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಕೊಂಚ ಮಂಕಾಗಿದ್ದರು. ಹೀಗಾಗಿ ಇವರ ಆಟದ ಮೇಲೆ ಹಲವು ಪ್ರಶ್ನೆಗಳು ಏಳುವಂತೆ ಮಾಡಿದ್ದವು. ಆದರೆ ಬೌನ್ಸಿ ಪಿಚ್‌ನಲ್ಲಿ ಮನಮೋಕ ಶತಕ ಬಾರಿಸುವ ಮೂಲಕ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಹಲವು ದಾಖಲೆಗಳನ್ನು ನಿರ್ಮಿಸಿರುವ ಯಶಸ್ವಿ, ರನ್ ಕಲೆ ಹಾಕಿರುವ ಲೆಕ್ಕಾಚಾರದಲ್ಲೂ ತಂಡದ ಪರ ಇವರೇ ಮುಂದೆ. ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಮೂರು ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಈಗ ಇವರ ಕಣ್ಣು ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮೇಲೆ ನೆಟ್ಟಿದೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು 23 ಇನ್ನಿಂಗ್ಸ್‌ಗಳಲ್ಲಿ 1280 ರನ್ ಗಳಿಸಿದ್ದಾರೆ. ಈ ವೇಳೆ 7 ಅರ್ಧ ಶತಕ ಮತ್ತು 3 ಶತಕ ಸೇರಿವೆ. ಇದೇ ಆಸ್ಟ್ರೇಲಿಯಾ ಸರಣಿಯಲ್ಲಿ ಜೈಸ್ವಾಲ್ ಇನ್ನು 263 ರನ್ ಸಿಡಿಸಿದರೆ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಬಹುದು.
ಸಚಿನ್ ತೆಂಡೂಲ್ಕರ್ 2010ರಲ್ಲಿ 23 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ 1562 ರನ್ ಸಿಡಿಸಿದ್ದರು. ಇದು ಭಾರತದ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಟರ್ ಒಬ್ಬ ದಾಖಲಿಸಿದ ಹೆಚ್ಚು ರನ್.

ಟೀಮ್ ಇಂಡಿಯಾದ ಯುವ ಬ್ಯಾಟರ್ ಈ ವರ್ಷ ಇನ್ನು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಈ ವೇಳೆ ಪ್ರಸಕ್ತ ಅವರ ಫಾರ್ಮ್ ನೋಡಿದರೆ, ಅವರು ಸುಲಭವಾಗಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಅಳಿಸಿ ಹಾಕಬಹುದು ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 6 ರಿಂದ ಆಡಿಲೇಡ್‌ನಲ್ಲಿ ಡೇ-ಆಂಡ್ ನೈಟ್ ಟೆಸ್ಟ್ ನಡೆಯಲಿದ್ದು, ಇದಾದ ಬಳಿಕ ಗಬ್ಬಾ ಹಾಗೂ ಮೆಲ್ಬೋರ್ನ್‌ನಲ್ಲಿ ತಲಾ ಒಂದು ಟೆಸ್ಟ್ ಪಂದ್ಯ ಆಡಬೇಕಿದೆ.