ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಈ ಮೆಗಾ ಟೂರ್ನಿಗೆ ಎಲ್ಲಾ ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ ಆತಿಥೇಯ ಪಾಕಿಸ್ತಾನ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯೊಂದನ್ನು ನೀಡಿದೆ. ಚಾಂಪಿಯನ್ ಟ್ರೋಫಿಗೂ ಮುನ್ನ ಪಾಕಿಸ್ತಾನ ತಂಡ ಹಿನ್ನಡೆ ಅನುಭವಿಸಿದೆ.
ಗಾಯದ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಸ್ಟಾರ್ ಬ್ಯಾಟರ್ ಹೊರಗುಳಿದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ತಂಡದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಅಯೂಬ್ ಗಾಯಗೊಂಡಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನವರಿ ತಿಂಗಳ ಆರಂಭದಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಸ್ಯಾಮ್ ಅಯೂಬ್ ಪಾದದ ಮುರಿತಕ್ಕೆ ಒಳಗಾಗಿದ್ದರು. ಸ್ಯಾಮ್ ಅವರ ಭವಿಷ್ಯದ ಮೇಲೆ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಪಿಸಿಬಿ ಮುಂದಾಗುವುದಿಲ್ಲ. ಹೀಗಾಗಿ ಅವರು ಗಾಯದಿಂದ ಚೇತರಿಸಿಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ನಖ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾನು ಪ್ರತಿದಿನ ಅವರ ವೈದ್ಯರೊಂದಿಗೆ ಮಾತನಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸ್ಯಾಮ್ ಅಯೂಬ್ ಪಾದದ ಪ್ಲಾಸ್ಟರ್ ಅನ್ನು ತೆಗೆಯುವ ಬಗ್ಗೆ ವೈದ್ಯ ಹೇಳಿದ್ದಾರೆ. ಆದರೆ ಅವರ ಸಂಪೂರ್ಣ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಚಾಂಪಿಯನ್ಸ್ ಟ್ರೋಫಿಗಾಗಿ ನಾವು ಅವರ ಭವಿಷ್ಯದ ವೃತ್ತಿಜೀವನವನ್ನು ಅಪಾಯಕ್ಕೆ ತೆಗೆದುಕೊಳ್ಳುವುದಿಲ್ಲ. ಅವರು ನಮ್ಮ ತಂಡದ ಪ್ರಮುಖ ಆಟಗಾರ. ನಾವು ಅವರನ್ನು ಸಂಪೂರ್ಣವಾಗಿ ಫಿಟ್ ಆಗಿ ಇರಿಸಿಕೊಳ್ಳಲು ಬಯಸುತ್ತೇವೆ. ಅದು ಎಷ್ಟು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಅವರ ಚೇತರಿಸಿಕೊಳ್ಳಲು ನಾನು ವೈಯಕ್ತಿಕವಾಗಿ ಗಮನಿಸುತ್ತಿದ್ದೇನೆ ಎಂದು ನಖ್ವಿ ಹೇಳಿದ್ದಾರೆ.
ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸ್ಯಾಮ್ ಅಯೂಬ್ ಲಭ್ಯರಾಗುತ್ತಾರೆಯೇ? ಎಂದು ತಿಳಿಯಲು ಪಾಕಿಸ್ತಾನದ ಆಯ್ಕೆಗಾರರು ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಇದೀಗ ಸ್ಯಾಮ್ ಹೊರಗುಳಿದಿರುವುದರಿಂದ ಪಾಕಿಸ್ತಾನದ ತಂಡವು ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಈಗ ಸ್ಯಾಮ್ ಸ್ಥಾನಕ್ಕೆ ಫಖರ್ ಜಮಾನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅಬ್ದುಲ್ಲಾ ಶಫೀಕ್ ಬದಲಿಗೆ ಶಾನ್ ಮಸೂದ್ ಮತ್ತು ಇಮಾಮ್ ಉಲ್ ಹಕ್ ಹೆಸರನ್ನು ಕೇಳಿ ಬರುತ್ತಿದೆ.